ಪ್ರಜ್ಞಾ ಮಾರ್ಪಳ್ಳಿಯ ಎರಡು ಕೃತಿಗಳ ಅನಾವರಣ
ಉಡುಪಿ, ಎ.30: ಲೇಖಕರ ಕೃತಿಯೊಂದು ಅನಾವರಣ ಗೊಂಡರೆ ಕೃತಿಕಾರರ ಮನಸ್ಸು ಹಾಗೂ ಹೃದಯ ಸಮಾಜಕ್ಕೆಬಿಡುಗಡೆಯಾದಂತೆ ಎಂದು ಖ್ಯಾತ ಸಾಹಿತಿ ವೈದೇಹಿ ಹೇಳಿದ್ದಾರೆ.
ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯ ಯನ ಕೇಂದ್ರದ ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಶನಿವಾರ ಕತೆಗಾರ್ತಿ, ಲೇಖಕಿ ಹಾಗೂ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮಾರ್ಪಳ್ಳಿಯವರ ಎರಡು ಕೃತಿಗಳನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಡಾ.ಪ್ರಜ್ಞಾ ಮಾರ್ಪಳ್ಳಿಯವರ ಕಥಾಸಂಕಲನ ‘ಭೂಮಿಯೊಳಗಿದೆ ಬದುಕು’ ಹಾಗೂ ಡಾ.ಎನ್.ಎನ್.ಲಕ್ಷ್ಮೀನಾರಾಯಣ ಭಟ್ಟರ ಸಮಗ್ರ ಕಾವ್ಯಗಳ ಅಧ್ಯಯನದ ‘ನಿನ್ನೆಗೆ ನನ್ನ ಮಾತು’ ಕೃತಿಗಳನ್ನು ಬಿಡುಗಡೆಗೊಳಿಸಿದ ವೈದೇಹಿ, ಲೇಖಕಿಗೆ ಹೆತ್ತವರು, ಬಂಧುಗಳ ಪ್ರೋತ್ಸಾಹ, ಒಳ್ಳೆಯ ವಾತಾವರಣ ಇದ್ದರೆ ಸಾಲದು, ಅವರ ಒಳಗೊಂದು ಸತ್ವಬೇಕು, ಆದ್ರ ಹೃದಯ, ಸೂಕ್ಷ್ಮಸಂವೇದನೆ, ಒಳದೃಷ್ಟಿ ಇರಬೇಕು. ಇವೆಲ್ಲವೂ ಪ್ರಜ್ಞಾ ಅವರಲ್ಲಿ ಇವೆ ಎಂದರು.
ಲೇಖಕಿ ಪ್ರಜ್ಞಾರಲ್ಲಿ ಮನುಷ್ಯ ಸಂವೇದನೆಯ ಒಳಪದರವನ್ನು ತಿಳಿಯುವ, ಅರಿಯುವ ಗುಣವಿದೆ. ಆಕೆ ಪರಿಪೂರ್ಣ ಲೇಖಕಿಯಾಗುವತ್ತ ಸಾಗುತ್ತಿರುವ ಸೂಚನೆಗಳು ಈ ಕತೆಗಳಲ್ಲಿವೆ ಎಂದರು.
ವಿಮರ್ಶಕ ಹಾಗೂ ಲೇಖಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹಾಗೂ ಅಂಕಣಕಾರ ಸಂತೋಷ್‌ಕುಮಾರ್ ಮೆಹಂದಳೆ ಕೃತಿ ಪರಿಚಯ ಮಾಡಿದರು.
ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಪ್ರಜ್ಞಾ ಮಾರ್ಪಳ್ಳಿ ಕೃತಿಗಳ ಕುರಿತು ಮಾತನಾಡಿದರು. ಪ್ರಕೃತಿ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.