ಮಳೆಗಾಲ: ಸಕಲ ಸಿದ್ಧತೆಗೆ ಕರಾವಳಿಯ 3 ಜಿಲ್ಲಾಡಳಿತಕ್ಕೆ ಸೂಚನೆ

Update: 2016-04-30 18:24 GMT


ಮಂಗಳೂರು, ಎ.30: ಪ್ರಸಕ್ತ ವರ್ಷ ಮಳೆಗಾಲದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಡಾ. ರಾಜ್‌ಕುಮಾರ್ ಖತ್ರಿ ಸೂಚಿಸಿದ್ದಾರೆ.
 2016ನೆ ಸಾಲಿನ ಮುಂಗಾರು ಮಳೆಯ ಪೂರ್ವಸಿದ್ಧತೆ ಹಾಗೂ ಮುಂಜಾಗರೂಕತಾ ಕ್ರಮಗಳ ಬಗ್ಗೆ ಚರ್ಚಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದ ಸಭೆ ನಡೆಸಿ ಅವರು ಮಾತನಾಡಿದರು. ನೈರುತ್ಯ ಮಾನ್ಸೂನ್‌ನಲ್ಲಿ ತೀವ್ರ ಮಳೆ ಉಂಟಾಗಿ, ಪ್ರವಾಹ ತಲೆದೋರುವ ಸಾಧ್ಯತೆಗಳ ಮುನ್ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶದಲ್ಲಿ ಹೆಚ್ಚು ಮಳೆಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
  ಎಲ್ಲ ತಾಲೂಕುಗಳಲ್ಲಿ ತುರ್ತು ನಿರ್ವಹಣಾ ತಂಡಗಳನ್ನು ಮತ್ತು ತುರ್ತು ಕಂಟ್ರೋಲ್ ರೂಂಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ತುರ್ತು ಕೇಂದ್ರವನ್ನು ಎಲ್ಲ ಸೌಲಭ್ಯಗಳೊಂದಿಗೆ ಸಿದ್ಧಗೊಳಿಸಬೇಕು ಎಂದು ಡಾ. ರಾಜ್‌ಕುಮಾರ್ ಖತ್ರಿ ತಿಳಿಸಿದರು.
  ಅಣಕು ಪ್ರದರ್ಶನ ಮೂಲಕ ಸಾರ್ವಜನಿಕರಿಗೆ ಪ್ರಕೃತಿ ವಿಕೋಪದ ಅಪಾಯ ಎದುರಿಸುವ ಬಗ್ಗೆ ಮಾಹಿತಿ ನೀಡಬೇಕು. ಅಗ್ನಿಶಾಮಕ ಸೇವೆ ಇಲಾಖೆ, ಕೋಸ್ಟ್‌ಗಾರ್ಡ್, ಪೊಲೀಸ್, ಆರೋಗ್ಯ ಇಲಾಖೆಗಳನ್ನು ಇದರಲ್ಲಿ ಬಳಸಿಕೊಳ್ಳಲು ಪ್ರಧಾನ ಕಾರ್ಯದರ್ಶಿ ಸೂಚಿಸಿದರು. ರಬ್ಬರ್ ಬೋಟುಗಳು, ಲೈಫ್ ಜಾಕೆಟ್ ಮತ್ತಿತರ ಸಾಧನಗಳನ್ನು ಸಜ್ಜುಗೊಳಿಸಬೇಕು. ಪ್ರಕೃತಿ ವಿಕೋಪ ಸಂದರ್ಭ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ, ಆರೋಗ್ಯ ಸೇವೆ, ಆಹಾರ, ವಿದ್ಯುತ್ ಮತ್ತಿತರ ವಿಷಯಗಳ ಕಡೆ ಗಮನಹರಿಸಲು ಅವರು ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತ ನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಸಂದರ್ಭ ಪ್ರಕೃತಿ ವಿಕೋಪಗಳುಂಟಾದರೆ ಎದುರಿಸಲು ಸನ್ನದ್ಧ
ವಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸ ಲಾಗುವುದು. ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ನೇತ್ರಾವತಿ ನದಿಯಿಂದ ಖಾಸಗಿ ಬಳಕೆಗೆ, ಕೃಷಿ ಚಟುವಟಿಕೆಗೆ ನೀರೆತ್ತುವುದನ್ನು ನಿಷೇಧಿಸಲಾಗಿದೆ. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ.ಗಳು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಆದ್ಯತೆಯಲ್ಲಿ ಶ್ರಮಿಸುತ್ತಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಮಾತನಾಡಿ, ಜಿಲ್ಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ, ಗ್ರಾಮಾಂತರ ಪ್ರದೇಶದಲ್ಲಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚು ಗಮನಹರಿಸಿದೆ ಎಂದು ಹೇಳಿದರು.
ಸಭೆಯಲ್ಲಿ ಕರ್ನಾಟಕ ಪ್ರಾಕೃತಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸ ರೆಡ್ಡಿ, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಉತ್ತರ ಕನ್ನಡ ಜಿಲ್ಲಾಡಳಿತದ ಪರವಾಗಿ ಅಲ್ಲಿನ ಅಧಿಕಾರಿ ಸದಾಶಿವ ಪ್ರಭು, ನಗರಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು, ಎನ್‌ಎಂಪಿಟಿ, ಕೋಸ್ಟ್‌ಗಾರ್ಡ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹವಾಮಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡಲು ‘ವರುಣಮಿತ್ರ’ ಎಂಬ ಸಹಾಯವಾಣಿ ತೆರೆಯಲಾಗಿದ್ದು,
ಸಾರ್ವಜನಿಕರು ಮೊ.ಸಂ.
9243345433ಕ್ಕೆ ಕರೆ ಮಾಡಿ ರಾಜ್ಯದ ಯಾವುದೇ ಪ್ರದೇಶಗಳ ಹವಾಮಾನ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News