ಭಟ್ಕಳ: ಬೆಳಕೆ ಗ್ರಾಪಂ ನಲ್ಲಿ ಲೋಕ ಅದಾಲತ್ ಕಾರ್ಯಕ್ರಮ

Update: 2016-05-01 07:57 GMT

ಭಟ್ಕಳ, ಮೇ 1: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ನೆರವು ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳಕೆ ಗ್ರಾಮ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್ ಕಾರ್ಯಕ್ರಮವನ್ನು ಸಿವಿಲ್ ಜಡ್ಜ್ ಹಿರಿಯ ನ್ಯಾಯಾಧೀಶ ಯಶ್ವಂತ ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕಾನೂನು ಅರಿವು ಪ್ರತಿಯೋರ್ವರಿಗೂ ಅವಶ್ಯಕವಿರುತ್ತದೆ. ಕಾನೂನಿನ ಅರಿವಿದ್ದರೆ, ನಾವು ಕಾನೂನಾತ್ಮಕವಾಗಿ ರಕ್ಷಣೆ ಪಡೆಯಲು ಸಾಧ್ಯವಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ರಾಜೇಶ ಐ. ನಾಯ್ಕ ವಹಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ಮಾತನಾಡಿ ಭಾರತದ ಕಾನೂನಿನ ಮೂಲ ಬೇರು ಸಂವಿಧಾನವಾಗಿದೆ. ಇಂತಹ ಕಾರ್ಯಕ್ರಮಗಳು ಯಾರೂ ಕೂಡಾ ಕಾನೂನಿನಿಂದ ವಂಚಿತರಾಗ ಬಾರದು ಎನ್ನುವ ಉದ್ದೇಶವನ್ನು ಹೊಂದಿದೆ. ಇಂದಿನ ನಮ್ಮ ಈ ಪರಿಸ್ಥಿತಿಗೆ ನಾವು ಪರಿಸರದ ಮೇಲೆ ನಡೆಸಿದ ದೌರ್ಜನ್ಯವೇ ಕಾರಣವಾಗಿದೆ. ಪ್ರತಿಯೋರ್ವರೂ ಪ್ರಕೃತಿಯ ಕುರಿತು ತಿಳಿದು ಕೊಂಡು ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಿ ಅಂತರ್ಜಲ ವೃದ್ಧಿಗೆ ಸಹಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ತೀವ್ರ ತೊಂದರೆಯಿಂದ ಪಾರಾಗಬಹುದು ಎಂದರು.

ಹಿರಿಯ ನ್ಯಾಯವಾದಿ ಹಾಗೂ ನೋಟರಿ ಆರ್. ಆರ್. ಶ್ರೇಷ್ಟಿ ಮಾತನಾಡಿ ನಮಗೆ ದೈನಂದಿನ ಜೀವನಕ್ಕೆ ಗಾಳಿ, ನೀರು, ಬೆಳಕು ಎಷ್ಟು ಅವಶ್ಯಕವೋ, ಕಾನೂನು ಕೂಡಾ ಅಷ್ಟೇ ಅವಶ್ಯಕವಾಗಿರುತ್ತದೆ. ನಾವು ನಮ್ಮ ದೈನಂದಿನ ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಕೂಡಾ ಕಾನೂನಾತ್ಮಕವಾಗಿಯೇ ನಡೆದುಕೊಳ್ಳುವ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಮಹಿಳಾ ದೌರ್ಜನ್ಯದ ಕಾನೂನು ಕುರಿತು ವಿವರಣೆ ನೀಡಿದ ಅವರು ಪ್ರತಿಯೋರ್ವ ಮಹಿಳೆಯೂ ಕೂಡಾ ಕಾನೂನು ನೆರವು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ನ್ಯಾಯವಾದಿ ಎಸ್. ಜೆ. ನಾಯ್ಕ ಕಾನೂನು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶ ಹನುಮಂತರಾವ್ ಕುಲಕರ್ಣಿ, ಡಾ. ಮಂಜು, ಪಂಚಾಯತ್ ಅಧ್ಯಕ್ಷ ರಮೇಶ ನಾಯ್ಕ, ಅಭಿವೃದ್ಧಿ ಅಧಿಕಾರಿ ಕರಿಯಪ್ಪ ನಾಯ್ಕ, ಸಿ.ಡಿ.ಪಿ.ಓ. ಶ್ರೀದೇವಿ ಭಟ್ಟ ಮುಂತಾದವರು ಉಪಸ್ಥಿತರಿದ್ದರು.ನ್ಯಾಯವಾದಿ ಎಂ.ಜೆ.ನಾಯ್ಕ ಸ್ವಾಗತಿಸಿದರು, ಎಂ.ಟಿ.ನಾಯ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News