ಮಂಗಳೂರು: ಜಿಲ್ಲಾ ಕಾಂಗ್ರೆಸ್‌ನ ಕಾರ್ಮಿಕ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ

Update: 2016-05-01 08:52 GMT

ಮಂಗಳೂರು, ಮೆ1: ಬಂಡವಾಳ ಶಾಹಿಗಳ ಬೆಂಬಲದಿಂದ ದೇಶ ಆಳುವ ಅಧಿಕಾರ ಪಡೆದು ಅವರನ್ನು ಬೆಂಬಲಿಸುತ್ತಿರುವವರಿಂದ ಕೊಂಡವರಿಂದ ಕಾರ್ಮಿಕರ ಹಿತ ರಕ್ಷಣೆ ಸಾಧ್ಯವಿದೆಯೇ ? ಈ ಬಗ್ಗೆ ಕಾರ್ಮಿಕರು ಎಚ್ಚರದಿಂದಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ತಿಳಿಸಿದರು.

 ಅವರು ಇಂದು ಜಿಲ್ಲಾ ಕಾಂಗ್ರೆಸ್‌ನ ಕಾರ್ಮಿಕ ಘಟಕದ ವತಿಯಿಂದ ನಗರದ ರವೀಂದ್ರಕಲಾಭವನದ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
 

ದೇಶದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಭವಿಷ್ಯ ನಿಧಿಯಂತಹ ಯೋಜನೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದಿದ್ದಾರೆ.ಪ್ರಸಕ್ತ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ನೌಕರರ ಭವಿಷ್ಯಕ್ಕೆ ಮಾರಕವಾಗುವ ತೀರ್ಮಾನವನ್ನು ತೆಗೆದುಕೊಂಡ ಪರಿಣಾಮವಾಗಿ ಕಾರ್ಮಿಕರು ಬೀದಿಗೆ ಇಳಿಯುವಂತಾಯಿತು.ಜಾತಿ,ಧರ್ಮದ ಹೆಸರಿನಲ್ಲಿ ಗಲಭೆ ಹುಟ್ಟಿಸಿ ಕಾರ್ಮಿಕರನ್ನು ಸಂಘಟಿಸುವವರ ಬಗ್ಗೆ ಕಾರ್ಮಿಕರು ಎಚ್ಚರವಹಿಸಬೇಕು.ಕಾಂಗ್ರೆಸ್ ಈ ರಾಷ್ಟ್ರದಲ್ಲಿ ನಿರಂತರವಾಗಿ ಬಡವರ,ದುರ್ಬಲರ ಶೋಷಿತರ ಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಆದರೆ ಕಾಂಗ್ರೆಸ್ ನಾಯಕರ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರದಲ್ಲಿ ಬಿಜೆಪಿ ತೊಡಗಿದೆ.ಕಾರ್ಮಿಕರ ವಿರುದ್ಧವಾದ ಕೇಂದ್ರಸರಕಾರದ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಮಿಕರನ್ನು ಸಂಘಟಿಸಿ ಹೋರಾಟ ನಡೆಸಲು ಹಿಂಜರಿಯುವುದಿಲ್ಲ ಎಂದು ರಮಾನಾಥ ರೈ ತಿಳಿಸಿದರು.

ಬೀಡಿ ಕಾರ್ಮಿಕರ ಸಮಸ್ಯೆಗೆ ರಾಜ್ಯ ಸರಕಾರ ಪರ್ಯಾಯ ಉದ್ಯೋಗ ನೀಡಲು ರಾಜ್ಯದಲ್ಲಿ ಜವುಳಿ ಕಾರ್ಖಾನೆಗಳನ್ನು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಆರಂಭಿಸಬೇಕು.ಪ್ರಸಕ್ತ ಕೇಂದ್ರ ಸರಕಾರದ ನೀತಿಯಿಂದ ಜಿಲ್ಲೆಯ 4ಲಕ್ಷಕ್ಕೂ ಅಧಿಕ ಮಂದಿ ಬೀಡಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ಐವನ್ ಡಿ ಸೋಜ ತಿಳಿಸಿದರು.
     

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲೋಕೇಶ್ ಹೆಗ್ಡೆ,ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಇತರ ಕಾಂಗ್ರೆಸ್ ಘಟಕದ ಪದಾಧಿಕಾರಿಗಳಾದ ಪದ್ಮನಾಭ ನರಿಂಗಾನ, ಕೆ.ಅಶ್ರಫ್, ಹೇಮನಾಥ ಶೆಟ್ಟಿ,ಮುಹಮ್ಮದ್ ಎಂ.ಎಸ್,ಶಾಹುಲ್ ಹಮೀದ್,ಅನಿತಾ ಹೇಮನಾಥ ಶೆಟ್ಟಿ,ನಝೀರ್ ಮಠ,ಮುಹಮ್ಮದ್ ರಫಿ ,ಜಯಂತಿ,ಮುಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಕಾರ್ಮಿಕರಾದ ಪರಮೇಶ್ವರ,ಅಲಿಯಬ್ಬ ಮೂಡುಶೆಡ್ಡೆ,ಬೋಜ ಕೋಟ್ಯಾನ್,ಅಪ್ಪುಸ್ವಾಮಿ,ಜಯಂತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News