ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಬಿ.ಅಹ್ಮದ್ ಹಾಜಿಗೆ ಗೌರವ ಡಾಕ್ಟರೇಟ್ ಪ್ರದಾನ

Update: 2016-05-01 11:07 GMT

ಬಂಟ್ವಾಳ, ಮೇ. 1: ಹಿರಿಯ ಉದ್ಯಮಿ, ಸಾಮಾಜಿಕ ಧಾರ್ಮಿಕ ಮುಂದಾಳು, ಪ್ರತಿಷ್ಠಿತ ಬಿ.ಎ. ಗ್ರೂಪ್ನ ಸಂಸ್ಥಾಪಕ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ರವಿವಾರ ಇಲ್ಲಿನ ತುಂಬೆ ಹಿಲ್ಸ್‌ನಲ್ಲಿ ನಡೆದ ಸರಳ, ಸುಂದರ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ ಅವರ ನೇತೃತ್ವದ ತಂಡ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತು.

ಪದವಿ ಸ್ವೀಕರಿಸಿದ ಬಳಿಕ ನೆರೆದಿದ್ದ ಗಣ್ಯರನ್ನುದ್ದೇಶಿಸಿ ಮಾತನಾಡಿದ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, ನಾನು ಪ್ರಾರಂಭಿಸಿದ ಉದ್ಯಮ ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ತನ್ನ ಮಕ್ಕಳು ಹಾಗೂ ಕುಟುಂಬಸ್ಥರ ಸಹಕಾರ ಹಾಗೂ ಪ್ರಧಾನವಾಗಿ ದೇವರ ಅನುಗ್ರಹ ಕಾರಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಕಂದಕ್ ರಸ್ತೆಯನ್ನು ಬಿ.ಮುಹಿಯು ದ್ದೀನ್ ಹಾಜಿ ರಸ್ತೆ ಎಂದು ನಾಮಫಲಕ ಬಿಡುಗಡೆಗೊಳಿಸುವ ಮೂಲಕ ಅರಣ್ಯ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಘೋಷಿಸಿದರು.

ಇದೇ ಸಂದರ್ಭದಲ್ಲಿ ಅಬ್ದುಲ್ಲ ಕುಂಞಿ ಬೈಕಾರ್ ಮತ್ತು ಕುಟುಂಬದ ಹಿರಿಯ ಸದಸ್ಯ ಯೆನೆಪೊಯ ಮುಹಮ್ಮದ್ ಕುಂಞಿಯವರನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಯೆನೆಪೊಯ ಸಮೂಹ ಸಂಸ್ಥೆಯ ಅಬ್ದುಲ್ಲ ಕುಂಞಿ ಅವರಿಗೆ ವರ್ಷದ ಹಿರಿಯ ಸಾಧಕ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿ ಕೆಇಎಫ್ ಗ್ರೂಪ್‌ನ ಅಧ್ಯಕ್ಷ ಕೆ.ಇ.ಫೈಝಲ್ ಅವರಿಗೆ ವರ್ಷದ ಯುವ ಸಾಧಕ ಪ್ರಶಸ್ತಿಯನ್ನು ಸಚಿವ ಯು.ಟಿ.ಖಾದರ್ ಪ್ರದಾನಿಸಿದರು.

ಮಹಿಳಾ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಫಾತಿಮಾ ಅಹ್ಮದ್ ಹಾಜಿ ಅವರನ್ನು ಝೋಹರಾ ಮೊಯ್ದಿನ್ ತುಂಬೆ ಸನ್ಮಾನಿಸಿ ಗೌರವಿಸಿದರೆ ಆಯಿಷ ಅಬ್ದುಲ್ಲಾ ಕುಂಞಿ ಚುಂಗೆ ಅವರನ್ನು ನೌಷೀನ್ ಸಲಾಮ್ ಸನ್ಮಾನಿಸಿ ಗೌರವಿಸಿದರು. ಹಾಗೆಯೇ ನಫೀಶತ್ ಬೀಬಿ ಅವರನ್ನು ಶಬನಾ ಫೈಝಲ್ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಶಾಸಕ ಜೆ.ಆರ್.ಲೋಬೊ, ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸೆಲರ್ ಶಾಂತಾರಾಮ ಶೆಟ್ಟಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ರವಿರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News