ಮತ್ತೆ ಮೂವರು ಆರೋಪಿಗಳ ಬಂಧನ

Update: 2016-05-02 16:25 GMT

ಮಂಗಳೂರು, ಮೇ 2: ಉಳ್ಳಾಲದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಯುವಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ರೂವಾರಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ಮೊಗವೀರ ಪಟ್ನದ ನಿವಾಸಿ ರಾಹುಲ್ ಪೂಜಾರಿ (22), ಅಂಬ್ಲ ಮೊಗರು ಎಲಿಯಾರ್ ಪದವಿನ ಪ್ರಜ್ವಲ್ ಯಾನೆ ಹೇಮಚಂದ್ರ (21) ಮತ್ತು ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ವಿನೀತ್ (22) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ಆರೋಪಿಗಳ ಪೈಕಿ ರಾಹುಲ್ ಪೂಜಾರಿ ಎಂಬಾತ ಹಲ್ಲೆ ಪ್ರಕರಣದ ಪ್ರಮುಖ ರೂವಾರಿಯಾಗಿದ್ದು, ಈತನ ಮೇಲೆ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ಕೊಲೆ ಯತ್ನ ಸಹಿತ ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಗಳಲ್ಲೂ ಕೊಲೆ ಯತ್ನದ ಪ್ರಕರಣಗಳು ದಾಖಲಾಗಿವೆ ಎಂದರು.

ಎ.14ರಂದು ಬೆಳಗ್ಗೆ 4:20ಕ್ಕೆ ಲತೀಫ್ ಮತ್ತು ಸಲೀಂ ಎಂಬವರು ಬೈಕ್‌ನಲ್ಲಿ ಮಂಗಳೂರು ಮೀನು ಧಕ್ಕೆಗೆ ಹೋಗುತ್ತಿದ್ದ ಹೋಗುತ್ತಿದ್ದ ಸಂದರ್ಭದಲ್ಲಿ ಕೋಡಿ ರಸ್ತೆಯ ಬಳಿಯಲ್ಲಿ ಕೆಲವರು ಬೈಕ್ ತಡೆದು ಹಲ್ಲೆ ನಡೆಸಿದ್ದರು.

ಎ. 25ರಂದು ಬೆಳಗ್ಗೆ 4:45ಕ್ಕೆ ಇಬ್ರಾಹೀಂ ಸಫ್ವಾನ್ ಎಂಬವರು ತಮ್ಮ ಬೈಕ್‌ನಲ್ಲಿ ಮೋಗವೀರ ಪಟ್ನ ಕೋಡಿ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕೆಲವು ಯುವಕರು ಇವರ ಬೈಕ್‌ನ್ನು ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಿದ್ದರು.

ಎ. 26ರಂದು ಮಧ್ಯರಾತ್ರಿ 12:50ರ ಸುಮಾರಿಗೆ ತೊಕ್ಕೊಟ್ಟು ಒಳಪೇಟೆ ಬಳಿ ಸೈಫಾನ್, ಸಲೀಂ ಮತ್ತು ನಿಝಾಂ ಎಂಬವರ ಕೊಲೆಗೆ ಯತ್ನ ಈ ಪೈಕಿ ಸೈಫಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅದೇ ದಿನ ಮಧ್ಯಾಹ್ನ 3:30ರ ಸುಮಾರಿಗೆ ಕಲ್ಲಾಪು ಪಟ್ನ ನಿವಾಸಿ ಸಫ್ವಾನ್ ಹಸನ್ ಕೊಲೆಗೆ ಯತ್ನ ಪ್ರಕಣಗಳಲ್ಲಿ ಬಂಧಿತ ರಾಹುಲ್ ಪೂಜಾರಿ ಪ್ರಮುಖ ರೂವಾರಿಯಾಗಿದ್ದಾನೆ. ಆರೋಪಿಗಳಲ್ಲಿ ಪ್ರಜ್ವಲ್ ಮತ್ತು ವನೀತ್ ಸ್ವಾನ್ ಹಸನ್ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಎಂದು ಚಂದ್ರಶೇಖರ್ ವಿವರಿಸಿದರು.

ಆರೋಪಿಗಳ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ವಾಮಂಜೂರಿನ ಪಚ್ಚನಾಡಿ ಬಳಿಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಐದು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿ ಹೇಳಿದರು.

ಸೆಕ್ಷನ್ 144 ವಿಸ್ತರಣೆ

ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ಅಹಿಕರ ಘಟನೆಯ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದ್ದು, ಸೋಮವಾರ ಸಂಜೆ 6 ಗಂಟೆಯಿಂದ ಮೇ 6ರ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ ಎಂದು ಪೊಲೀಸ್ ಆಯಕ್ತರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಎಂ.ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News