ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಕಾರ್ಮಿಕ ದಿನಾಚರಣೆ

Update: 2016-05-02 18:50 GMT

ಉಡುಪಿ, ಮೇ 2: ಚುನಾಯಿತ ಸರಕಾರಗಳು ಕಾರ್ಮಿಕರ ನೀತಿ ನಿಯಮಗಳನ್ನು ರೂಪಿಸು ವಾಗ ಬಡ ಕಾರ್ಮಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕೇ ಹೊರತು ಬಂಡವಾಳಶಾಹಿಗಳ ಹಾಗೂ ಮೇಲ್ವರ್ಗದ ಜನರಿಗೆ ಅನುಕೂಲವಾಗುವ ನೀತಿಗಳನ್ನು ರೂಪಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಉಡುಪಿ ಧರ್ಮಪ್ರಾಂತದ ಕಾರ್ಮಿಕ ಆಯೋಗ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡಲಾಗುವ ಗುರುತು ಚೀಟಿಗಳನ್ನು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ ವಿತರಿಸಿದರು.

ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಪ್ರಾಂತದ ವಿಕಾರ್ ಜನರಲ್ ವಂ. ಬ್ಯಾಪ್ಟಿಸ್ಟ್ ಮಿನೇಜಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕಾರ್ಮಿಕ ಇಲಾಖೆಯ ನೀರೀಕ್ಷಕ ಎಸ್.ಎಸ್. ರಾಮಮೂರ್ತಿ, ಜೀವನ್ ಕುಮಾರ್ ಕೆ.ಎಚ್., ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಧರ್ಮಪ್ರಾಂತದ 18 ಆಯೋಗಗಳ ಸಂಯೋಜಕ ವಂ. ಹೆರಾಲ್ಡ್ ಪಿರೇರಾ, ಉಡುಪಿ ವಲಯ ಕಾರ್ಮಿಕ ಆಯೋಗದ ನಿರ್ದೇಶಕ ವಂ. ಕ್ಲೇಮಂಟ್ ಮಸ್ಕರೇನ್ಹಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ನೂತನ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ, ಧರ್ಮಪ್ರಾಂತದ ಕಾರ್ಮಿಕ ಆಯೋಗದ ಕಾರ್ಯದರ್ಶಿ ಮಾಗ್ದಲೆನ್ ಮಥಾಯಸ್, ಸಂಚಾಲಕ ರೋನಾಲ್ಡ್ ಮಿನೇಜಸ್, ಜೋಸೆಪ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಧರ್ಮಪ್ರಾಂತದ ಕಾರ್ಮಿಕ ಆಯೋಗದ ನಿರ್ದೇಶಕ ಎಲ್‌ರೊಯ್ ಕಿರಣ್ ಕ್ರಾಸ್ತಾ ಸ್ವಾಗತಿಸಿದರು. ಜೋಸೆಫ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News