ದುರ್ನಾತ ಬೀರುತ್ತಿರುವ ಕಡಬದ ಶೌಚಾಲಯ

Update: 2016-05-03 06:14 GMT

ಕಡಬ, ಮೇ.3. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬ ಪೇಟೆಯಲ್ಲಿ ಸುಸಜ್ಜಿತ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ.

ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಅದೆಷ್ಟೋ ಕೋಟಿ ರೂ. ಖರ್ಚು ಮಾಡುವಾಗ ಮೂಲಭೂತ ಸೌಕರ್ಯಗಳಲ್ಲೊಂದಾದ ಶೌಚಾಲಯ ವ್ಯವಸ್ಥೆಯನ್ನು ಕಡಬ ಪೇಟೆಯಲ್ಲಿ ನಿರ್ಮಿಸಿದ್ದಲ್ಲಿ ಅದೆಷ್ಟೋ ಜನರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಬಹುದು. ತಾಲೂಕಿಗೆ ಸಂಬಂಧಪಟ್ಟಂತೆ ಹೆಚ್ಚಿನ ಎಲ್ಲಾ ಕಾರ್ಯಗಳೂ ಕಡಬದಲ್ಲಿಯೇ ಆಗುವುದರಿಂದ ಪರಿಸರದ 35 ಗ್ರಾಮಗಳಿಂದ ಅಗತ್ಯ ಕೆಲಸಗಳಿಗಾಗಿ ದಿನನಿತ್ಯ ಕಡಬ ಪೇಟೆಗೆ ಆಗಮಿಸುವ ಸಾವಿರಾರು ಮಂದಿ ತಮ್ಮ ಬಹಿರ್ದೆಸೆಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಅದೂ ಅಲ್ಲದೆ ಮಂಗಳೂರು - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯು ಕಡಬ ಪೇಟೆಯ ಮೂಲಕವೇ ಹಾದು ಹೋಗಿದ್ದು, ಈ ರಸ್ತೆಯ ಮೂಲಕ ತೆರಳುವ ಪ್ರಯಾಣಿಕರೂ ಕಡಬದ ಶೌಚಾಲಯದ ಶೋಚನೀಯ ಸ್ಥಿತಿಯನ್ನು ಕಂಡು ಮರುಗಿದ್ದಾರೆ.

ಕಡಬದ ಹಳೆಯ ಬಂಗಲೆಯ ಪರಿಸರದಲ್ಲಿ ಹಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಕಡಬ ಪರಿಸರದಲ್ಲಿ ಇನ್ನೂ ಬಯಲು ಶೌಚಾಲಯ ವ್ಯವಸ್ಥೆಗೆ ಕಡಿವಾಣ ಬಿದ್ದಿಲ್ಲವೆನ್ನುವುದು ಇದರಿಂದ ತಿಳಿದು ಬರುತ್ತದೆ.

  ಸುಮಾರು ಏಳೆಂಟು ವರ್ಷಗಳ ಹಿಂದೆ ಕಡಬ ಗ್ರಾಮ ಪಂಚಾಯತ್ ವತಿಯಿಂದ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಅದರ ಶುಚಿತ್ವದ ಕಡೆಗೆ ಗಮನ ಹರಿಸದಿರುವುದರಿಂದಾಗಿ ದುರ್ನಾತ ಬೀರುತ್ತಿದೆ. ಪುರುಷರು ಹಾಗೂ ಮಹಿಳೆಯರಿಗಾಗಿ ಒಟ್ಟು ನಾಲ್ಕು ಕೋಣೆಗಳಿದ್ದರೂ ಅದರಲ್ಲಿ ಸದ್ಯಕ್ಕೆ ಉಪಯೋಗದಲ್ಲಿರುವುದು ಒಂದು ಕೋಣೆ ಮಾತ್ರ. ಇನ್ನುಳಿದಂತೆ ಬಾಕಿ ಇರುವ ಮೂರು ಕೋಣೆಗಳೂ ನೀರು ನಿಂತು ಬ್ಲಾಕ್ ಆಗಿದ್ದು, ಹತ್ತಿರದಿಂದ ನಡೆದಾಡಲೂ ಹೇಸುವಂತಾಗಿದೆ.

ಪಕ್ಕದಲ್ಲೇ ಗ್ರಾ.ಪಂ. ವತಿಯಿಂದ ಬಾಡಿಗೆಗಾಗಿ ಕೊಡಮಾಡಿದ ಅಂಗಡಿಗಳಿದ್ದು, ಇಲ್ಲಿಗೆ ವ್ಯಾಪಾರಕ್ಕಾಗಿ ಬರುವ ಗ್ರಾಹಕರೂ ಕೆಲವೊಮ್ಮೆ ಮೂಗು ಮುಚ್ಚಿಕೊಂಡು ಬರಬೇಕಾದ ಸ್ಥಿತಿ ಉಂಟಾಗಿದೆ. ಪೇಟೆಯ ಹೃದಯ ಭಾಗದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿದ್ದು ದುರ್ನಾತ ಬೀರುತ್ತಿರುವ ಈ ಶೌಚಾಲಯವನ್ನು ಕೆಡವಿ ನೂತನ ಶೌಚಾಲಯ ನಿರ್ಮಿಸಬೇಕೆನ್ನುವುದು ಊರವರ ಹಲವು ಸಮಯಗಳ ಬೇಡಿಕೆಯಾಗಿದೆ. ಆದರೆ ಕಡಬ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯು ಈ ಬೇಡಿಕೆಗೆ ಸೊಪ್ಪು ಹಾಕಿಲ್ಲ. ನೂತನ ಸುಸಜ್ಜಿತ ಶೌಚಾಲಯಕ್ಕಾಗಿ ಹಿಂದಿನ ಆಡಳಿತದಲ್ಲಿಯೇ 4 ಲಕ್ಷ ರೂ. ಹಣ ಬಿಡುಗಡೆಯಾಗಿದ್ದು, ಇನ್ನೂ ಕಾಮಗಾರಿ ಪ್ರಾರಂಭಿಸುವ ಗೋಜಿಗೆ ಹೋಗಿಲ್ಲ. ಹೀಗಾದಲ್ಲಿ ಶೌಚಾಲಯಕ್ಕಾಗಿ ಬಿಡುಗಡೆಯಾಗಿರುವ ಅನುದಾನವು ಹಿಂದಿರುಗಿ ಹೋಗುವ ಸಂಭವವಿದೆ ಎನ್ನುತ್ತಾರೆ ಪಂಚಾಯತ್ ಸದಸ್ಯರೋರ್ವರು. ಇನ್ನಾದರೂ ಕಡಬ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ಎಚ್ಚೆತ್ತುಕೊಂಡು ನೂತನ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಿ.

ಕಡಬದಲ್ಲಿ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಆದಷ್ಟು ಬೇಗನೆ ನೂತನ ಶೌಚಾಲಯವನ್ನು ನಿರ್ಮಿಸಲಿ.

 - ಸೀತಾರಾಮ ಕೆ. ಅಧ್ಯಕ್ಷರು, ಕದಂಬ ಹಿತರಕ್ಷಣಾ ಸಂಘಟನೆ ಕಡಬ

ರಾಜ್ಯದ ವಿವಿಧ ಪಟ್ಟಣಗಳಲ್ಲಿರುವಂತೆ ಇಲ್ಲೂ ಉತ್ತಮ ಸುಲಭ ಶೌಚಾಲಯ ವ್ಯವಸ್ಥೆ ಪ್ರಾರಂಭಿಸಲಿ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಿ.

- ಇಸ್ಮಾಯಿಲ್ ಜಿ. ಕೋಶಾಧಿಕಾರಿ, ವರ್ತಕರ ಸಂಘ ಕಡಬ.

Writer - ತಸ್ಲೀಂ ಮರ್ಧಾಳ

contributor

Editor - ತಸ್ಲೀಂ ಮರ್ಧಾಳ

contributor

Similar News