ಜನರ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯುತ್ತಿದೆ ಅಧಿಕಾರಿಗಳ ನಿರ್ಲಕ್ಷ

Update: 2016-05-03 14:41 GMT

ಮಂಗಳೂರು, ಮೇ 3: ನಗರದಲ್ಲಿ ನೀರಿನ ಬರ ಕಾಣಿಸಿಕೊಂಡಿದ್ದು, ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದರೆ ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡ ನಂತರ ಎಚ್ಚೆತ್ತುಕೊಂಡಿದ್ದ ಮನಪಾ, ಎರಡು ದಿನಕ್ಕೊಮ್ಮೆ ನೀರು ಪೂರೈಸುವ ಭರವಸೆಯನ್ನು ನೀಡಿದೆ. ಆದರೆ ಹೆಚ್ಚಿನೆಡೆ ಎರಡು ದಿನಕ್ಕೊಮ್ಮೆಯೂ ನೀರು ತಲುಪುತ್ತಿಲ್ಲ. ನೀರು ಸಿಗದಿದ್ದರೆ ಅಧಿಕಾರಿಗಳಿಗೆ ಕರೆ ಮಾಡಿ ಎಂದು ಇತ್ತೀಚೆಗೆ ಪತ್ರಿಕಾ ಪ್ರಕಟನೆಯನ್ನು ಮನಪಾ ನೀಡಿತ್ತು. ಆದರೆ ಇಲಾಖೆ ನೀಡಿರುವ ದೂರವಾಣಿಗಳಿಗೆ ಕರೆ ಮಾಡುವುದು ವ್ಯರ್ಥ ಪ್ರಯತ್ನ ಎಂಬ ಆರೋಪ ಕೇಳಿಬರುತ್ತಿದೆ.

ಇಲಾಖೆ ನೀರು ಸಿಗದಿದ್ದರೆ ಕರೆ ಮಾಡಿ ಎಂದು ನೀಡಿರುವ ಅಧಿಕಾರಿಗಳ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಅಧಿಕಾರಿಗಳು ಕರೆಯ್ನನೇ ಸ್ವೀಕರಿಸುವುದಿಲ್ಲ. ಒಂದು ವೇಳೆ ಸ್ವೀಕರಿಸಿದರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನೀರಿನ ಸಮಸ್ಯೆ ಬಾರದಂತೆ ಗಮನಹರಿಸಲು, ದೂರು ಕರೆಗಳನ್ನು ಸ್ವೀಕರಿಸಿ ಶೀಘ್ರ ನೀರಿನ ಸಮಸ್ಯೆಯನ್ನು ನಿವಾರಿಸಲು 60 ವಾರ್ಡ್‌ಗಳಿಗೂ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅಧಿಕಾರಿಗಳಿಗೆ ವಾರ್ಡ್‌ಗಳನ್ನು ಹಂಚಿ ನೀಡಲಾಗಿದ್ದು, ಕಿರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮತ್ತು ಕಾರ್ಯಪಾಲಕ ಅಭಿಯಂತರರ ದೂರವಾಣಿ ಸಂಖ್ಯೆಯನ್ನು ನೀಡಲಾಗಿತ್ತು. ಆದರೆ ಇದರಲ್ಲಿ ಹೆಚ್ಚಿನವರು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲವೆಂಬುದೇ ಜನರ ಆರೋಪ.

ಮಂಗಳೂರು ಮಹಾನಗರಪಾಲಿಕೆಯು ಜನರ ಹಿತವನ್ನು ಇಟ್ಟುಕೊಂಡು ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ನೀಡಿದರೆ ಅಧಿಕಾರಿಗಳು ಮಾತ್ರ ತಮ್ಮ ನಿರ್ಲಕ್ಷವನ್ನು ಮುಂದುವರಿಸುತ್ತಲೇ ಇದ್ದಾರೆ. ಇದರಿಂದ ನೀರಿನ ಸಮಸ್ಯೆಗೊಳಗಾಗಿ ದಿಕ್ಕೆ ತೋಚದಂತಿರುವ ಜನರ ಕಣ್ಣೀರು ಒರೆಸುವವರೇ ಇಲ್ಲದಂತಾಗಿದೆ.

ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ನನಗೂ ಸಾಕಷ್ಟು ದೂರುಗಳು ಬಂದಿದೆ. ಈ ಬಗ್ಗೆ ಸೋಮವಾರ ಅಧಿಕಾರಿಗಳನ್ನು ಕರೆಸಿ ವಿಚಾರಿಸಲಾಗಿದೆ. ಈ ಸಂದರ್ಭ್ಲ ಅವರು ನೀರಿನ ಸಮಸ್ಯೆ ಬಗೆಹರಿಸಲು ಫೀಲ್ಡ್‌ವರ್ಕ್ ಮಾಡುವಾಗ ಕರೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಜನರ ದೂರನ್ನು ಸ್ವೀಕರಿಸಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು: ಹರಿನಾಥ್, ಮನಪಾ ಮೇಯರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News