ಬೆಳ್ತಂಗಡಿ: ನೀರಿನ ಕೊರತೆಯಿಂದಾಗಿ ಸಾವಿರಾರು ಮೀನುಗಳು ನಾಶ

Update: 2016-05-04 09:07 GMT

ಬೆಳ್ತಂಗಡಿ, ಮೇ 4: ನೀರಿನ ಕೊರತೆಯಿಂದಾಗಿ ಸಾವಿರಾರು ದೇವರ ಮೀನುಗಳು ನಾಶ ಹೊಂದುತ್ತಿರುವ ವಿದ್ಯಮಾನ ಕರಂಬಾರು ಗ್ರಾಮದ ಶ್ರೀ ಕೇಳ್ಕರೇಶ್ವರ ದೇವಸ್ಥಾನದ ಸನಿಹದ ನದಿಯಲ್ಲಿ ನಡೆಯುತ್ತಿದೆ.

ಗುರುವಾಯನಕೆರೆಯಿಂದ ಸುಮಾರು ಏಳೆಂಟು ಕಿ.ಮೀ ದೂರದಲ್ಲಿರುವ ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ. ಇಲ್ಲಿ ದೇವರ ಗುಂಡಿಯಲ್ಲಿ ನಾನಾ ಜಾತಿಯ ಮೀನುಗಳಿವೆ ಪೆರುವೊಳು, ಪುರಿಯೊಳು, ತರು, ಕೊಡ್ಯೆಲೆ ಮತ್ತಿತರ ಅಪೂರ್ವಜಾತಿಯ ದೊಡ್ಡದೊಡ್ಡ ಮೀನುಗಳು ಇದ್ದು ದೇವಸ್ಥಾನಕ್ಕೆ ಬರುವ ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜೊತೆಗೆ ಮಡೆಂಜಿ, ಏಡಿ, ಸಿಗಡಿಗಳೂ ಇವೆ. ಪ್ರಸ್ತುತ ಬಿರು ಬೇಸಗೆಯಿಂದಾಗಿ ಕಳೆದ ನಾಲ್ಕು ದಿನಗಳಿಂದೀಚೆಗೆ ಮೀನುಗಳ ಮಾರಣ ಹೋಮ ನಡೆಯುತ್ತಿದೆ. ನದಿಯಲ್ಲಿ ನೀರಿನ ಹರಿವು ಕಾಣೆಯಾಗಿದೆ ಅಲ್ಲದೆ ಇರುವ ಬೃಹತ್ ಹೊಂಡದಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಈ ಹೊಂಡದಲ್ಲೇ ಸಾವಿರಾರು ಮೀನುಗಳು ಇವೆ. ಕಳೆದ ನಾಲ್ಕು ದಿನಗಳಿಂದ ನೀರಿನ ಮತ್ತಷ್ಟು ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಹೊಂಡದ ನೀರು ಬಿಸಿಯಾಗತೊಡಗಿದೆ. ಅಲ್ಲದೆ ಹೊಂಡದ ಸುತ್ತಲೂ ಬಂಡೆಗಲ್ಲುಗಳೇ ತುಂಬಿವೆ. ಇದರಿಂದ ನೀರು ಇನ್ನಷ್ಟು ಬಿಸಿಯಾಗುತ್ತಿದೆ. ಬಿಸಿ ನೀರಿನ ಪ್ರಭಾವದಿಂದಾಗಿ, ಹೊಸ ನೀರು ಇಲ್ಲದೆ ಇರುವ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗಿ ಮೀನುಗಳು, ಇನ್ನಿತರ ಜಲಚರಗಳು ಒಂದೊಂದಾಗಿ ಸಾಯತೊಡಗಿವೆ. ಕಳೆದ ನಾಲ್ಕು ದಿನಗಳಿಂದ ಸಾವಿರಾರು ಮೀನುಗಳು ಸತ್ತುತೇಲುತ್ತಿದ್ದು ಸ್ಥಳೀಯರು ಅವನ್ನೆಲ್ಲ ಮೇಲಕ್ಕೆತ್ತಿ ಸಮಾಧಿ ಮಾಡಿದ್ದಾರೆ. ಸತ್ತ ಮೀನುಗಳನ್ನು ಎಷ್ಟೇ ಮೇಲಕ್ಕೆತ್ತಿದರೂ ಮತ್ತೂ ಮತ್ತೂ ತೇಲುವ ದೃಶ್ಯಕಾಣುತ್ತಿದೆ.

ಪರಿಸರ ದುರ್ವಾಸನೆ ಬೀರುತ್ತಿದೆ
  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ   ಅಧ್ಯಕ್ಷ ನವೀನ್ ಸಾಮಾನಿ, ಸ್ಥಳೀಯರು ಮೀನುಗಳನ್ನುಳಿಸಲು ಹರ ಸಾಹಸ ಪಡುತ್ತಿದ್ದಾರೆ. ಸನಿಹದ ಕೊಳವೆ ಬಾವಿಯಿಂದ ನೀರನ್ನು ಹೊಂಡಕ್ಕೆ ಹಾಯಿಸಿದ್ದಾರೆ. ದೇವಸ್ಥಾನಕ್ಕೆ ಬರುವ ರಸ್ತೆಯ ಡಾಮರೀಕರಣ ನಡೆಯುತ್ತಿದ್ದು ಅದರ ಗುತ್ತಿಗೆದಾರರು ಟ್ಯಾಂಕರ್ ಮೂಲಕ ನೀರುತಂದು ಹೊಂಡ ತುಂಬಿಸುತ್ತಿದ್ದಾರೆ. ಎಷ್ಟೇ ಏನೇ ಮಾಡಿದರೂ ಮೀನುಗಳನ್ನುಳಿಸಲು ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೆರಡು ದಿನಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಲ್ಲಿ ಮಾತ್ರ ಉಳಿದ ಲಕ್ಷಾಂತರ ಮೀನುಗಳು ಉಳಿಯಲು ಸಾಧ್ಯ ಎಂಬತಾಗಿದೆ  ಇಲ್ಲಿನ ಸ್ಥಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News