ಉಳ್ಳಾಲ: ಮೇ 5ರಂದು ಒಂದೇ ಅವಧಿಯಲ್ಲಿ ಎರಡು ಝಿಕ್ರ್ ಮಜ್ಲಿಸ್!

Update: 2016-05-04 15:20 GMT

ಮಂಗಳೂರು, ಮೇ 4: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಸಮಿತಿ ಅಧ್ಯಕ್ಷರ ಆಯ್ಕೆ ಗೊಂದಲ ಮುಂದುವರಿದಿರುವಂತೆಯೇ ಇದೀಗ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳು ಆಚರಿಸಿಕೊಂಡು ಬರುವ ಮಾಸಿಕ ಝಿಕ್ರ್ ಮಜ್ಲಿಸ್ ಕಾರ್ಯಕ್ರಮದ ಬಗ್ಗೆ ಗೊಂದಲ ಉಂಟಾಗಿದೆ. ಒಂದೇ ದಿನಾಂಕ ಮತ್ತು ಒಂದೇ ಅವಧಿಯಲ್ಲಿ ಮಾಸಿಕ ಝಿಕ್ರ್ ಮಜ್ಲಿಸ್ ನಡೆಯಲಿದೆ ಎಂದು ಎರಡು ಕಡೆಗಳಿಂದ ಹೇಳಲಾಗಿದೆ.

ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳು ನಡೆಯುವ ಝಿಕ್ರ್ ಮಜ್ಲಿಸ್ ಕಾರ್ಯಕ್ರಮವು ಮೇ 5ರಂದು ಸಂಜೆ 4 ಗಂಟೆಗೆ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವದಲ್ಲಿ ಮಾಸಿಕ ಝಿಕ್ರ್ ಮಜ್ಲಿಸ್ ನಡೆಯಲಿದೆ ಎಂದು ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾದ ‘ಹಂಗಾಮಿ ಅಧ್ಯಕ್ಷ’ ಅಬ್ದುಲ್ ಬುಖಾರಿ ಕಲ್ಲಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ‘ಅಧ್ಯಕ್ಷ’ ಅಬ್ದುಲ್ ರಶೀದ್, ನಾನು ಸಮಿತಿಯ ಹಂಗಾಮಿ ಅಧ್ಯಕ್ಷನಾಗಿ ಆಯ್ಕೆಯಾದಂದಿನಿಂದ ಮಸೀದಿ ಮತ್ತು ದರ್ಗಾಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮೇ 5 ರಂದು ಸಂಜೆ 4 ಗಂಟೆಗೆ ಮಾಸಿಕ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಉಮ್ರಾ ಯಾತ್ರೆಯಲ್ಲಿರುವುದರಿಂದ ಈ ಝಿಕ್ರ್ ಮಜ್ಲಿಸ್ ಕಾರ್ಯಕ್ರಮವು ಸೈಯದ್ ಮದನಿ ಅರೆಬಿಕ್ ಕಾಲೇಜಿನ ಪ್ರೊಫೆಸರ್ ಹಾಜಿ ಅಹ್ಮದ್ ಬಾವ ಮುಸ್ಲಿಯಾರ್, ಅಬ್ದುಲ್ ರಶೀದ್ ಮದನಿ ಮತ್ತು ಚೆರ್‌ಕುಂಞಿ ತಂಙಳ್, ಕೇಂದ್ರ ಜುಮಾ ಮಸೀದಿಯ ಖತೀಬ್ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್‌ರ ಸಮಕ್ಷಮದಲ್ಲಿ ಜರಗಲಿದೆ ಎಂದು ‘ಅಧ್ಯಕ್ಷ’ ಅಬ್ದುಲ್ ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದು ಹೊಸ ವಿವಾದಕ್ಕೆ ದಾರಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News