ಒಂದು ಗಂಟೆಗೂ ಅಧಿಕ ಹೊತ್ತು ರಸ್ತೆಯಲ್ಲಿ ಹರಿದ ಕುಡಿಯುವ ನೀರು!

Update: 2016-05-04 14:05 GMT

ಮಂಗಳೂರು,ಮೇ4: ನಗರದಲ್ಲಿ ನೀರಿಗಾಗಿ ಹಾಹಾಕಾರ ಮುಂದುವರಿದಿರುವಂತೆಯೇ ನಗರದ ಬೆಂದೂರ್‌ವೆಲ್ ಬಳಿ ಕುಡಿಯುವ ನೀರಿನ ಪೈಪ್ ರಿಪೇರಿ ಸಂದರ್ಭ ಮುಂಜಾಗ್ರತಾ ಕ್ರಮವಿಲ್ಲದೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕುಡಿಯುವ ನೀರು ಮಣ್ಣು ಪಾಲಾಗುತ್ತಿದ್ದ ದೃಶ್ಯ ಕಂಡು ಬಂದಿದೆ.

ಇಂದು ಸಂಜೆಯ ವೇಳೆಗೆ ಬೆಂದೂರ್‌ವೆಲ್ ಜಂಕ್ಷನ್ ಬಳಿ ನೀರಿನ ಪೈಪ್ ದುರಸ್ತಿ ವೇಳೆ ಪೈಪ್‌ನಲ್ಲಿದ್ದ ನೀರನ್ನು ಹೊರಕ್ಕೆ ಪಂಪ್ ಮಾಡಲಾಗಿದ್ದು, ಅದನ್ನು ಟ್ಯಾಂಕರ್‌ಗಳಲ್ಲಿ ತುಂಬಿಸಿ ಸಾರ್ವಜನಿಕರಿಗೆ ಸರಬರಾಜು ಮಾಡುವ ಬದಲು ರಸ್ತೆಯಲ್ಲಿ ಚೆಲ್ಲಿದ ದೃಶ್ಯ ನಗರದ ಜನರ ಬವಣೆಯನ್ನು ಅಣಕಿಸುವಂತಿತ್ತು.

ಈ ಬಗ್ಗೆ ಸ್ಥಳೀಯರು ನೀರನ್ನು ಟ್ಯಾಂಕರ್‌ಗಳಲ್ಲಿ ತುಂಬಿಸುವಂತೆ ರಸ್ತೆ ಕಾಮಗಾರಿ ನಡೆಸುತ್ತಿದ್ದವರನ್ನು ಕೋರಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮನಪಾ ಅಧಿಕಾರಿಗಳನ್ನು ‘ವಾರ್ತಾಭಾರತಿ’ ಸಂಪರ್ಕಿಸಿದಾಗ, ಪೈಪ್‌ಲೈನ್‌ನಲ್ಲಿ ಗಾಳಿ ತುಂಬಿ ನೀರು ಸರಬರಾಜಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಿಪೇರಿ ಕಾರ್ಯ ಮಾಡಲಾಗಿದೆ. ತುರ್ತಾಗಿ ರಿಪೇರಿ ಕಾರ್ಯದ ಹಿನ್ನೆಲೆಯಲ್ಲಿ ಟ್ಯಾಂಕರ್ ತರಿಸಿ ಪೈಪ್ ಮೂಲಕ ಪೈಪ್‌ಲೈನ್‌ನಲ್ಲಿದ್ದ ನೀರು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಕಾರ್ಪೊರೇಟರ್ ನವೀನ್ ಡಿಸೋಜರನ್ನು ಸಂಪರ್ಕಿಸಿದಾಗ,‘‘ಕುಡಿಯುವ ನೀರಿನ ಪೈಪ್‌ಲೈನ್‌ನ ದುರಸ್ತಿ ಕಾರ್ಯ ತುರ್ತಾಗಿ ನಡೆಯಬೇಕಾಗಿದ್ದರಿಂದ ಪೈಪ್‌ಲೈನ್‌ನ ನೀರು ಖಾಲಿ ಮಾಡಬೇಕಾದ ಅನಿವಾರ್ಯತೆ ಇತ್ತು. ಕ್ಷಿಪ್ರ ಅವಧಿಯಲ್ಲಿ ಕಾರ್ಯ ನಡೆಬೇಕಾಗಿದ್ದರಿಂದ, ಇಂಜಿನಿಯರ್‌ಗಳು ಕೂಡಾ ತುಂಬೆಯಲ್ಲಿ ಕುಡಿಯುವ ನೀರಿನ ತುರ್ತು ಕಾರ್ಯಾಚರಣೆಯಲ್ಲಿ ನಿರತವಾಗಿರುವುದರಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಹಾಗಿದ್ದರೂ ಸಿಬ್ಬಂದಿ ತುರ್ತಾಗಿ ರಿಪೇರಿ ಕಾರ್ಯ ಮುಗಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News