ಬತ್ತಿದೆ ಮೂಡುಬಿದಿರೆಯ ಜೀವನದಿ ಫಲ್ಗುಣಿ

Update: 2016-05-05 17:42 GMT

ಮೂಡುಬಿದಿರೆ, ಮೇ 5: ಪುರಸಭಾ ವ್ಯಾಪ್ತಿಗೆ ನೀರಿನ ಮೂಲವಾಗಿರುವ ಮೂಡುಬಿದಿರೆಯ ಜನತೆಯ ಜೀವನದಿಯಂತೆ ನೀರುಣಿಸುತ್ತಿದ್ದ ಫಲ್ಗುಣಿಯು ಬಿಸಿಲ ಬೇಗೆಗೆ ತತ್ತರಿಸಿ ನೀರು ಬತ್ತಿ ಹೋಗಿರುವುದರಿಂದ ಹೋಬಳಿಯ ನಗರ ಹಾಗೂ ಗ್ರಾಮಾಂತರ ಎರಡೂ ಪ್ರದೇಶಗಳಲ್ಲಿ ನೀರಿನ ಸಮರ್ಪಕ ಮೂಲಗಳ ಕೊರತೆಯಿಂದಾಗಿ ಜನರ ಪರದಾಟ ಪ್ರಾರಂಭವಾಗಿದೆ.

ಫಲ್ಗುಣಿ ನದಿಗೆ ಬಂಟ್ವಾಳ ತಾಲೂಕು ಹಾಗೂ ಮೂಡುಬಿದಿರೆ ಹೋಬಳಿಯ ಸಂಪರ್ಕ ಸೇತುವಾಗಿರುವ ಪುಚ್ಚೆಮೊಗರು ಪ್ರದೇಶದಲ್ಲಿ ಹಲವು ದಶಕಗಳ ಹಿಂದೆ ಕಟ್ಟಲಾಗಿರುವ ಡ್ಯಾಂ, ಮೂಡುಬಿದಿರೆ ನಗರ ನೀರಿನ ಪ್ರಮುಖ ಮೂಲವಾಗಿದೆ. ನಗರದ ಬಹುತೇಕ ನಾಗರಿಕರಿಗೆ ಭಾರಿ ಪ್ರಮಾಣದಲ್ಲಿ ನೀರು ಸರಬರಾಜು ಏಕೈಕ ಮೂಲವಾಗಿಯೂ ಇದು ಗುರುತಿಸಿಕೊಂಡಿದೆ. ಬೇಸಿಗೆಯನ್ನು ಹೊರತುಪಡಿಸಿದರೆ ಪ್ರತಿದಿನ ಸುಮಾರು 35 ಲಕ್ಷ ಲೀ. ನೀರು ನಗರವಾಸಿಗಳಿಗೆ ಈ ಡ್ಯಾಂನ ಮೂಲಕ ಲಭ್ಯವಾಗುತ್ತದೆ. ಆದರೆ ಕಳೆದ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಉದ್ಭವವಾಗಿದೆ.

ಕಳೆದ 15 ದಿನಗಳ ಹಿಂದೆ, ಪುಚ್ಚೆಮೊಗರು ಡ್ಯಾಂನಲ್ಲಿ ಕಾರ್ಯಾಚರಿಸುತ್ತಿರುವ ಜಾಕ್‌ವೆಲ್ ಬಳಿ ನೀರು ಸಂಪೂರ್ಣ ಬತ್ತಿ ಹೋಗಿದ್ದು ನೀರಿಗಾಗಿ ಸಾರ್ವಜನಿಕರಿಂದ ಹಾಹಾಕಾರ ಕೇಳಿ ಬರುತ್ತಿದೆ. ಜನರು ನೀರಿಗಾಗಿ ಪುರಸಭಾಧಿಕಾರಿಗಳ ಬೆನ್ನ ಹಿಂದೆ ಬಿದ್ದಿದ್ದಾರೆ.

ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಮೂಡುಬಿದಿರೆ ಪುರಸಭೆಯು ಪರ್ಯಾಯವಾಗಿ ಪಂಪ್‌ಹೌಸ್‌ನಿಂದ ಸುಮಾರು 200ಮೀ.ನಷ್ಟು ಅಂತರದಲ್ಲಿರುವ ಅನೆಗುಂಡಿಯಿಂದ ತಾತ್ಕಲಿಕ ವ್ಯವಸ್ಥೆ ವ್ಯವಸ್ಥೆ ಕಲ್ಪಿಸಿದೆ. ಆದರೆ ಈ ಪರ್ಯಾಯ ವ್ಯವಸ್ಥೆಯಿಂದ ಸದ್ಯಕ್ಕೆ ಕೇವಲ 5 ಲಕ್ಷ ಲೀ. ನೀರು ನಗರವಾಸಿಗಳಿಗೆ ಸರಬರಾಜಾಗುತ್ತಿದೆ. ಇನ್ನು ಹತ್ತು ದಿನಗಳಲ್ಲಿ ಪರ್ಯಾಯ ವ್ಯವಸ್ಥೆಯಲ್ಲಿಯೂ ನೀರು ಬತ್ತಿಹೋಗುವ ಸಂಭವವಿದೆ. ಮುಂಬರುವ ವರ್ಷಗಳಲ್ಲಿ ನೀರಿನ ಸಮಸ್ಯೆ ಉದ್ಭವಾಗದಂತೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪೈಪ್‌ಲೈನ್ ಕಾಮಗಾರಿಯೂ ಪ್ರಗತಿಯಲ್ಲಿದೆ.

ಆದ್ಯತೆಯ ಮೇರೆಗೆ ಕೆಲವು ಪ್ರದೇಶಗಳಿಗೆ ಮೂಡುಬಿದಿರೆ ಪುರಸಭೆಯು 6 ಸಾವಿರ ಲೀ.ಸಾಮರ್ಥ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ದಿನಕ್ಕೆ 60 ಸಾವಿರ ಲೀಟರ್‌ಗೂ ಅಧಿಕ ನೀರು ಟ್ಯಾಂಕರ್ ಮೂಲಕ ಸರಬರಾಜಾಗುತ್ತಿದ್ದು, ಗುತ್ತಿಗೆದಾರ ಗಿರೀಶ್ ಪೇಪರ್‌ಮಿಲ್ ಬಳಿಯಲ್ಲಿರುವ ತಮ್ಮ ಸ್ವಂತ ಬೋರ್‌ವೆಲ್ ಮೂಲಕ ಪುರಸಭೆ ಟ್ಯಾಂಕರ್‌ಗೆ ಉಚಿತವಾಗಿ ನೀರು ಕಲ್ಪಿಸುತ್ತಿದ್ದಾರೆ.

ಅಗ್ನಿಶಾಮಕ ಸಹಿತ ವಿವಿಧ ಇಲಾಖೆಗೂ ನೀರಿನ ಸಮಸ್ಯೆ

ಪುಚ್ಚಮೊಗರು ಮತ್ತು ಕಡಲಕೆರೆಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಮೂಡುಬಿದಿರೆಯ ಅಗ್ನಿಶಾಮಕ ವಾಹನಕ್ಕೂ ನೀರಿನ ಕೊರತೆ ಕಾಡಿದೆ. ಆದರೆ ತಮ್ಮ ಸ್ವಂತ ಆಸಕ್ತಿಯಿಂದ ನೀರಿನ ಒರತೆಗಳು ಎಲ್ಲೆಲ್ಲಾ ಇವೆಯೋ ಅಲ್ಲಿಂದ ಕೇಳಿ ಪಡೆದುಕೊಂಡು ತಮ್ಮ ಅಗ್ನಿಶಾಮಕ ವಾಹನಕ್ಕೆ ನೀರನ್ನು ಪೂರೈಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದಲ್ಲದೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಕ್ವಾರ್ಟರ್ಸ್‌ಗಳಿಗೆ, ಸಹಿತ ಇತರ ಇಲಾಖೆಗಳೂ ನೀರಿನ ಸಮಸ್ಯೆಯಿಂದ ತತ್ತರಿಸಿವೆ.

ಗ್ರಾಪಂ ವ್ಯಾಪ್ತಿಗೂ ತೊಂದರೆ

ನೀರಿನ ಸಮಸ್ಯೆ ಮೂಡುಬಿದಿರೆ ಹೋಬಳಿಯ ಕೇವಲ ನಗರವನ್ನು ಮಾತ್ರ ಬಾಧಿಸಿಲ್ಲ, ನೀರಿನ ಸಮಸ್ಯೆಯಿಂದಾಗಿ ಗ್ರಾಮಾಂತರದ ಹೆಚ್ಚಿನ ಪ್ರದೇಶಗಳು ತೊಂದರೆಯನ್ನು ಅನುಭವಿಸುತ್ತಿದೆ. ಮೂಡುಬಿದಿರೆ ಪೇಟೆಯಿಂದ ಕೆಲವೇ ಕಿ.ಮೀ. ದೂರವಿರುವ ಇರುವೈಲು, ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೂ ಹೆಚ್ಚಿದೆ. ಕೃಷಿ ಪ್ರದಾನ ಪಾಲಡ್ಕ, ಹೊಸಬೆಟ್ಟು, ಕಲ್ಲಮುಂಡ್ಕೂರು, ನಿಡ್ಡೋಡಿ ಪ್ರದೇಶಗಳಲ್ಲೂ ನೀರಿನ ಸಮಸ್ಯೆಗಳು ಹೆಚ್ಚಾಗಿವೆ. ಹೋಬಳಿಯ 12 ಗ್ರಾ.ಪಂ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ನೀರಿನ ಸರಬರಾಜು ಸಮರ್ಪಕವಾಗಿರದ ಕಾರಣ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News