ಕರಾವಳಿ ತೀರ ಭದ್ರತೆಗೆ ಕಟ್ಟುನಿಟ್ಟಿನ ಕಣ್ಗಾವಲು: ಸುರೇಶ್

Update: 2016-05-05 18:22 GMT

ಮಂಗಳೂರು, ಮೇ 5: ಕರ್ನಾಟಕದ ಕರಾವಳಿಯಾದ್ಯಂತ ಭದ್ರತೆ ಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳು, ಆಸ್ತಿಗಳು, ಶಾಪಿಂಗ್ ಮಾಲ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಕಣ್ಗಾವಲು ಇರಿಸಲಾಗುತ್ತಿದೆ ಎಂದು ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ವಿಭಾಗದ ಮಹಾನಿರೀಕ್ಷಕ ಕೆ. ಆರ್. ಸುರೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರಾವಳಿ ತೀರಗಳಲ್ಲಿ ಭದ್ರತೆಗೆ ಸಂಬಂಧಿಸಿ ವಿವಿಧ ಸಂಘ ಸಂಸ್ಥೆಗಳು, ಬೃಹತ್ ಕೈಗಾರಿಕೆಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯವು 17 ದ್ವೀಪಗಳೊಂದಿಗೆ 320 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದ್ದು, ಕರಾವಳಿ ಭದ್ರತೆ ಗಂಭೀರ ವಿಷಯವಾಗಿರುವುದರಿಂದ ಪ್ರಮುಖ ಸ್ಥಳಗಳನ್ನು ಕಣ್ಗಾವಲಿನಲ್ಲಿರಿಸಬೇಕಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಪ್ರಧಾನ ಕಾರ್ಯದರ್ಶಿಯವರ ನಿರ್ದೇಶನದ ಮೇರೆಗೆ ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸಿ ಕರಾವಳಿ ಭದ್ರತೆಯ ಕುರಿತಂತೆ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಪ್ರಸ್ತಾವವನ್ನು ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭದ್ರತಾ ಪೊಲೀಸ್, ಪೊಲೀಸ್ ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆ ಸೇರಿದಂತೆ ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆಯ ಮೂಲಕ ಭದ್ರತೆಯನ್ನು ಕಾಯ್ದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕರಾವಳಿ ರಕ್ಷಣಾ ಪಡೆಯು ಜಿಲ್ಲಾಡಳಿತ ಹಾಗೂ ಪೊಲೀಸರ ಸಹಕಾರದಲ್ಲಿ ಭದ್ರತೆಗೆ ಸಂಬಂಧಿಸಿ ‘ಸಾಗರ ಕವಚ’ ಎಂಬ ಕಾರ್ಯಾ ಚರಣೆ ನಡೆಸುತ್ತದೆ. ನಗರದಲ್ಲಿ ಇತ್ತೀಚೆಗೆ ಈ ಕಾರ್ಯಾಚರಣೆ ಮಾಡಲಾಗಿದ್ದು, ಅದರಲ್ಲಿ ಕಂಡು ಬಂದ ನ್ಯೂನತೆಗಳು, ಕೈಗೊಳ್ಳಬಹುದಾದ ಮುಂಜಾಗೃತಾ ಕ್ರಮಗಳ ಬಗ್ಗೆ ಪ್ರಸ್ತಾವದಲ್ಲಿ ಸೂಚಿಸಲಾಗುವುದು.


ಸಮುದ್ರದಲ್ಲಿ ಹಡಗುಗಳ ಅಪಹರಣ ಸಾಧ್ಯತೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ನಿರ್ದಿಷ್ಟ ಕಾರ್ಯ ವಿಧಾನ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್)ಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಬಗ್ಗೆ ಕರಾವಳಿ ರಕ್ಷಣಾ ಪಡೆ ಮತ್ತು ಎನ್‌ಎಂಪಿಟಿಯ ಹಿರಿಯ ಅಧಿಕಾರಿಗಳು ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ. ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಂಸ್ಥೆಗಳಲ್ಲಿಯೂ ನಿರ್ದಿಷ್ಟ ಕಾರ್ಯ ವಿಧಾನವನ್ನು ಸಿದ್ಧಪಡಿಸಬೇಕಾಗಿದೆ ಎಂದು ಅವರು ಹೇಳಿದರು. ಡಿಸಿಪಿ (ಅಪರಾಧ ಮತ್ತು ಸಂಚಾರ) ಡಾ. ಸಂಜೀವ ಎಂ. ಪಾಟೀಲ್ ಮಾತನಾಡಿದರು.

ತುರ್ತು ಸಂದರ್ಭಗಳಲ್ಲಿ 100 ಸಂಖ್ಯೆಗೆ ಕರೆ ಮಾಡಿ
 
ಕಟ್ಟಡಗಳ ಪಾರ್ಕಿಂಗ್ ಏರಿಯಾದಲ್ಲೂ ಭದ್ರತಾ ವ್ಯವಸ್ಥೆಯನ್ನು ಖಾತರಿಪಡಿಸಬೇಕು. ಸಾರ್ವಜನಿಕರು ಕೂಡಾ ತಾವು ಪ್ರಯಾಣಿಸುವ ಸಂದರ್ಭ ಹೊಸ ಅಥವಾ ಅನುಮಾನಾಸ್ಪದ ವಾಹನಗಳ ನಿಲುಗಡೆಯಾಗಿದ್ದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳು ನಿರ್ದಿಷ್ಟ ಸ್ಥಳಗಳಲ್ಲಿ ಅಡ್ಡಾಡುತ್ತಿರುವುದನ್ನು ಕಂಡಾಗ ಆ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವ ವೇಳೆ ಸ್ಥಳೀಯ ಪೊಲೀಸರಿಂದ ಒಪ್ಪಿಗೆ ಪತ್ರ ಪಡೆಯುವುದು ಕಡ್ಡಾಯ. ಕಟ್ಟಡಗಳ ಭದ್ರತೆಗೆ ಸಂಬಂಧಿಸಿ ಅಗತ್ಯವಿದ್ದಲ್ಲಿ ಶಸ್ತ್ರಾಸ್ತ್ರ ಪರವಾನಿಗೆ ನೀಡುವ ಬಗ್ಗೆಯೂ ಪೊಲೀಸ್ ಇಲಾಖೆ ಸಹಕರಿಸಲಿದೆ. ಪ್ರಮುಖ ಸಂಸ್ಥೆಗಳು ಹಾಗೂ ಕಟ್ಟಡಗಳು, ಮಾಲ್‌ಗಳ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸುವುದು ಅತ್ಯಗತ್ಯ. ಭದ್ರತೆಗೆ ಸಂಬಂಧಿಸಿ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಪೊಲೀಸ್ ದೂರವಾಣಿ ಸಂಖ್ಯೆ 100ಗೆ ಕರೆ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ತೋರ್ಪಡಿಸಬೇಕು ಎಂದು ಡಿಸಿಪಿ ಸಲಹೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ದೇಶದ್ರೋಹಿ ಶಕ್ತಿಗಳಿಗೆ ಕರಾವಳಿ ತೀರಗಳು ಅತ್ಯಂತ ಸುಲಭದ ರಹದಾರಿಯಾಗಿರುವುದರಿಂದ ಕರಾವಳಿ ತೀರಗಳಲ್ಲಿ ಭದ್ರತೆ ಪ್ರಮುಖ ಅಂಶವಾಗಿದೆ. ತುರ್ತು ಸಂದರ್ಭಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬದಲು, ಎಲ್ಲಾ ಸಂದರ್ಭಗಳಲ್ಲಿಯೂ ಜಾಗೃತರಾಗಬೇಕಾಗಿದ್ದು, ತುರ್ತು ಸಂದರ್ಭಗಳನ್ನು ಎದುರಿಸಲು ನಿರ್ದಿಷ್ಟ ಕಾರ್ಯ ವಿಧಾನವನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯ.
-ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News