ಸಮಸ್ಯೆ ಪರಿಹರಿಸದಿದ್ದರೆ ಮುಷ್ಕರ: ಲಾರಿ ಮಾಲಕರ ಸಂಘ

Update: 2016-05-06 09:30 GMT

ಮಂಗಳೂರು, ಮೇ6: ಲಾರಿ ಮಾಲಕರು ಟೋಲ್‌ಗೇಟ್ ಸುಂಕ, ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರಕಾರ ಮಧ್ಯ ಪ್ರವಶಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿರುವ ಕರಾವಳಿ ಕರ್ನಾಟಕ ಲಾರಿ ಮಾಲಕರ ಸಂಘ, ಇಲ್ಲವಾದಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಸಂತ ಬಂಗೇರ ಹೊಸಬೆಟ್ಟು, ಟೋಲ್‌ಗೇಟ್ ಸುಂಕದಿಂದ ಲಾರಿ ಮಾಲಕರಿಗೆ ಹೊರೆಯಾಗುತ್ತಿದೆ ಎಂದರು.

ನಿಯಮ ಮೀರಿ 60 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಟೋಲ್‌ಗೇಟ್ ರದ್ದು ಮಾಡಬೇಕು ಹಾಗೂ ಲಾರಿಗಳಿಗೆ ಕನಿಷ್ಠ ಮಿತಿಯೊಳಗೆ ಸುಂಕ ನಿಗದಿ ಮಾಡಬೇಕು. ಡೀಸೆಲ್ ಬೆಲೆ ಕಡಿಮೆಯಾದಾಗ ಟ್ರಾನ್ಸ್‌ಪೋರ್ಟ್ ಏಜೆನ್ಸಿಗಳು ಬಾಡಿಗೆ ಕಡಿಮೆ ಮಾಡುತ್ತಾರೆ. ಆದರೆ ಡೀಸೆಲ್ ಅಥವಾ ಇತರ ವಾಹನ ಉಪಯೋಗಿ ವಸ್ತುಗಳ ಬೆಲೆ ಏರಿಕೆಯಾದಾಗ ಬಾಡಿಗೆ ದರ ಏರಿಸುವುದಿಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಿ ಪರಿಷ್ಕೃತ ದರ ನಿಗದಿಗೆ ನ್ಯಾಯ ಸಮಿತಿ ರಚಿಸಬೇಕು ಎಂದವರು ಹೇಳಿದರು.

ಪಣಂಬೂರು ಬಂದರಿನಲ್ಲಿ ಈ ಮೊದಲು 24 ಗಂಟೆ ಲೋಡಿಂಗ್, ಅನ್‌ಲೋಡಿಂಗ್ ಸೇವೆ ಇತ್ತು. ಸದ್ಯ ಇಲಲದೆ ಮಧ್ಯಾಹ್ನ 3.30ರ ನಂತರ ಲಾರಿಗಳನ್ನು ಬಂದರಿನ ಒಳಗಡೆ ಪ್ರವೇಶಿಸದಂತೆ ತಡೆಯುತ್ತಾರೆ. ಇದರಿಂದ ತುಂಬಿದ ಲಾರಿ ಮರುದಿನದವರೆಗೆ ಕಾಯಬೇಕು. ರಜಾ ದಿನಗಳಲ್ಲಿ ಲೋಡಿಂಗ್ ವಿಳಂಬವಾಗುತ್ತದೆ. ಇದರಿಂದ ನಷ್ಟವಾಗುತ್ತಿದ್ದು, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸರಕಾರದ ನಿಯಮದ ಪ್ರಕಾರ ರಾಜ್ಯದೊಳಗಿನ ಕಂಪನಿಯ ಸರಕು ಸಾಗಾಟಕ್ಕೆ ರಾಜ್ಯದ ಲಾರಿಗಳ್ನೇ ಬಳಸಬೇಕಿದ್ದರೂ ಟ್ರಾನ್ಸ್‌ಪೋರ್ಟ್ ಏಜೆನ್ಸಿಯವರು ನಕಲಿ ಬಿಲ್ ಮಾಡಿ ಹೊರ ರಾಜ್ಯದ ಲಾರಿಗಳ ಮೂಲಕ ಸಾಗಾಟ ನಡೆಸುತ್ತಾರೆ. ವಾಹನದಲ್ಲಿ ನಿರ್ದಿಷ್ಟ ಭಾರದ ನಿಯಮ ಮೀರಿ ಅಧಿಕ ಭಾರವನ್ನು ಏಜೆನ್ಸಿಯವರು ಲಾಭಕ್ಕಾಗಿ ಹಾಕುತ್ತಾರೆ. ಸರಕಾರ ಈಬಗ್ಗೆ ಎಲ್ಲಾ ಸರಕು ಸಾಗಾಟ ಸಂಸ್ಥೆಗಳಿಗೆ ಪರಿಷ್ಕೃತ ವಾಹನ ತೂದ ಭಾರವನ್ನು ಹಾಕುವಂತೆ ಹಾಗೂ ನಿಯಮ ಮೀರಿದರೆ ಆ ಸಂಸ್ಥೆಗಳನ್ನು ಹೊಣೆ ಮಾಡುವಂತೆ ಸುತ್ತೋಲೆ ಹೊರಡಿಸಬೇಕು. ಪ್ರತಿ ಏಜೆನ್ಸಿಯವರು ಲಾರಿ ಮಾಲಕರಲ್ಲಿ ಪಾನಂ ಕಾರ್ಡ್ ಪ್ರತಿ ಪಡೆಯುತ್ತಾರೆ. ಆದರೆ ಲಾರಿ ಮಾಲಕರು ಸರಕಾರಕ್ಕೆ ಕಟ್ಟವ ತೆರಿಗೆ ವಿನಾಯಿತಿಗೆ ಟಿಡಿಎಸ್ ಸರ್ಟಿಫಿಕೇಟ್ ನೀಡದೆ ವಂಚಿಸುತ್ತಾರೆ ಎಂದು ಅವರು ಕಾರ್ಯಕಾರಿ ಸಮಿತಿ ಸದಸ್ಯ ವರುಣ್ ಚೌಟ ಆರೋಪಿಸಿದರು. 
ಮಂಗಳೂರು ಬಂದರಿನಲ್ಲಿ ಕೆಲವು ಟ್ರಾನ್ಸ್‌ಪೋರ್ಟ್ ಏಜೆನ್ಸಿಯವರು ಬಂದರಿನ ಹೊರಗೆ ತೂಕ ಮಾಡಿಸಿ ಅಕ್ರಮವಾಗಿಬಂದರಿನ ಬಿಲ್ಲು ಪಡೆಯುತ್ತಾರೆ. ನಿಯಮಾನುಸಾರ ಬಂದರಿನೊಳಗೆ ಲಾರಿ ಹಾಗೂ ಸರಕನ್ನು ತೂಕ ಮಾಡುವುದು ಕಡ್ಡಾಯವಾಗಬೇಕು ಎಂದು ಅವರು ಆಗ್ರಹಿಸಿದರು.

ಕ್ಯಾರಿಂಗ್ ಆ್ಯಂಡ್ ಫಾರ್ವಡಿಂಗ್ ಏಜೆನ್ಸಿಯವರು ಬಂದರಿನಲ್ಲಿಯೂ ಇತರ ಸರಕು ಗೋಡಾನ್‌ಗಳಲ್ಲಿ ಸರಕುಗಳನ್ನು ಖಾಲಿ ಮಾಡಬೇಕಾದರೆ ವಿನಾ ಕಾರಣಗಳನ್ನು ನೀಡಿ ತುಂಬಿದ ಲಾರಿಗಳನ್ನು ಐದೇಳು ದಿನ ಕಾಯಿಸುತ್ತಾರೆ. ದರಿಂದ ಲಾರಿ ಮಾಲಕರಿಗೆ ನಷ್ಟವಾಗುತ್ತದೆ. ಕನಿಷ್ಠ 10 ಲಾರಿಗಳ ಮಾಲಕರಿಗೆ ಟ್ರಾನ್ಸ್‌ಪೋರ್ಟ್ ಏಜೆನ್ಸಿ ಪರವಾನಿಗೆ ಕಡ್ಡಾಯಗೊಳಿಸಬೇಕು. ಕರ್ನಾಟಕ ರಜ್ಯಾದಲ್ಲಿ ನಿಗದಿತ ಪರಿಷ್ಕೃತ ಬಾಡಿಗೆ ದರ ನಿಗದಿಪಡಿಸಬೇಕು. ಟ್ರಾನ್ಸ್‌ಪೋರ್ಟ್ ಏಜೆನ್ಸಿಯವರ ಪ್ರತ್ಯೇಕ ಸಮಿತಿ ಅಥವಾ ಸಂಘವಿದ್ದರೆ ಸರಕಾರ ಕಡ್ಡಾಯವಾಗಿ ಲಾರಿ ಮಾಲಕರ ಸಂಘದ ಪದಾಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಿ ಪದಾಧಿಕಾರಿ ಹುದ್ದೆ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಸರಕಾರ ಗಮನ ಹರಿಸಿ ಪರಿಹರಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಿದ್ದು, ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಸಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಗೌರವಾಧ್ಯಕ, ಕೆ.ಬಿ.ಸುಜನ್, ಉಪಾಧ್ಯಕ್ಷ ಓಬೈ ಅಬ್ರಹಾಂ, ಕಾರ್ಯದರ್ಶಿ ಸಚಿನ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News