ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ತಜ್ಞರ ಸಮಿತಿ ನೇಮಿಸುವಂತೆ ಸಚಿವ ಎಚ್.ಕೆ. ಪಾಟೀಲ್‌ಗೆ ಐವನ್ ಡಿಸೋಜ ಮನವಿ

Update: 2016-05-06 13:41 GMT

ಮಂಗಳೂರು, ಮೇ 6: ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ಅನುದಾನ ಒದಗಿಸಲು ಮತ್ತು ಕೃಷಿಗೆ ಉಂಟಾದ ನಷ್ಟವನ್ನು ಅಂದಾಜಿಸಲು ತಜ್ಞರ ಸಮಿತಿ ನೇಮಿಸುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ. ಪಾಟೀಲ್‌ರನ್ನು ಆಗ್ರಹಿಸಿದರು.

ದ.ಕ. ಜಿಲ್ಲೆಯ 5 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು  ಕೃಷಿಗೆ ಉಂಟಾದ ನಷ್ಟವನ್ನು ಪರಿಶೀಲಿಸಿ ತಜ್ಞರ ಸಮಿತಿಯೊಂದನ್ನು ರಚಿಸಿ ವರದಿಯನ್ನು ತರಿಸಬೇಕೆಂದು ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಶಾಶ್ವತವಾಗಿ ಸಮಸ್ಯೆಯನ್ನು ಪರಿಹರಿಸಲು ಯಾವ ಯೋಜನೆಗಳನ್ನು ಕೈಗೊಳ್ಳಬೇಕೆಂದು ಅಭ್ಯಸಿಸಿ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ಜಿಲ್ಲೆಗೆ ಕಳುಹಿಸಿಕೊಡಬೇಕೆಂದು ಪ್ರಸ್ತುತ ಜಿಲ್ಲೆಯ ಪರಿಸ್ಥಿತಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಚಿವರಿಗೆ ಐವನ್ ವಿವರಿಸಿದರು.

ದ.ಕ. ಜಿಲ್ಲೆಗೆ ಬಿಡುಗಡೆ ಮಾಡಿದ ಅನುದಾನವು ಸಾಕಷ್ಟು ಇದ್ದರೂ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಕೊಳವೆ ಬಾವಿಗಳ ಗಾತ್ರವು ಹೆಚ್ಚಾಗಿರುವುದರಿಂದ ತೆರೆದ ಬಾವಿಗಳ ನೀರು ಬತ್ತಿ ಹೋಗಿ ಕುಡಿಯುವ ಸಮಸ್ಯೆ ಉಂಟಾಗಿದ್ದು ಅಲ್ಲದೇ ಕೃಷಿಗೂ ನೀರಿನ ಲಭ್ಯತೆ ಇಲ್ಲದೇ ಕೃಷಿ ಉತ್ಪನ್ನಗಳ ಹಿನ್ನಡೆಯಾಗಿದೆ ಹಾಗೂ ಅಡಿಕೆ ಮರಗಳು ಸುಟ್ಟು ಹೋಗಿದೆ ಎಂದು ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನವಿಯನ್ನು ಪರಿಶೀಲಿಸಿದ ಸಚಿವರು ಇತರ ಇಲಾಖೆಗಳೊಂದಿಗೆ ಚರ್ಚಿಸಿ, ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಂಡು ತಜ್ಞರ ಸಮಿತಿಯನ್ನು ಕಳುಹಿಸಿಕೊಟ್ಟು ವರದಿ ತರಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಒಂದು ವರದಿಯನ್ನು ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಜ್ಞರ ವರದಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News