ಪುತ್ತೂರು ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಅಧ್ಯಕ್ಷರಾಗಿ ರಾಧಾಕೃಷ್ಣ ಬೋರ್ಕರ್ ಆಯ್ಕೆ ಬಹುತೇಕ ಖಚಿತ

Update: 2016-05-06 17:06 GMT

ಪುತ್ತೂರು, ಮೇ 6: ತಾಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುವವುಳ್ಳ ಬಿಜೆಪಿಯ ಕೆ.ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ರಾಜ್ಯದ 175 ತಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರಕಾರ ಈ ಹಿಂದೆ ಕರಡು ಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಅಹ್ವಾನಿಸಿತ್ತು. ಕರಡು ಪಟ್ಟಿಯಲ್ಲಿ ಪುತ್ತೂರಿನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ನೀಡಲಾಗಿತ್ತು. ಬಳಿಕ ಈ ಪಟ್ಟಿಯ ಪೈಕಿ ಪುತ್ತೂರು ತಾಪಂ ಸೇರಿದಂತೆ 31 ತಾಪಂಗಳಲ್ಲಿ ಮೀಸಲಾತಿಯನ್ನು ಬದಲಾಯಿಸಿ ಸರಕಾರ ಆದೇಶ ಮಾಡಿತ್ತು. ಈ ಬದಲಾವಣೆಯ ಪಟ್ಟಿಯಂತೆ ಪುತ್ತೂರು ತಾ.ಪಂಗೆ ‘ಹಿಂದುಳಿದ ವರ್ಗ ಎ’ ಸ್ಥಾನಕ್ಕೆ ಮೀಸಲಾಗಿರಿಸಿ ಆದೇಶ ನೀಡಿದೆ.

24 ಸದಸ್ಯ ಸ್ಥಾನಗಳನ್ನು ಹೊಂದಿರುವ ಪುತ್ತೂರು ತಾಪಂನಲ್ಲಿ 16 ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಪಡೆಯಲು ಅರ್ಹತೆ ಪಡೆದುಕೊಂಡಿದೆ. ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ರಾಧಾಕೃಷ್ಣ ಬೋರ್ಕರ್ ಸೇರಿದಂತೆ ಕೆಯ್ಯೂರು ಕ್ಷೇತ್ರದ ಸದಸ್ಯೆ ಭವಾನಿ ಚಿದಾನಂದ, ಉಪ್ಪಿನಂಗಡಿ ಕ್ಷೇತ್ರದ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಐತ್ತೂರು ಕ್ಷೇತ್ರದ ಸದಸ್ಯೆ ಕುಸುಮಾ ಮತ್ತು ಆಲಂಕಾರು ಕ್ಷೇತ್ರದ ಸದಸ್ಯೆ ತಾರಾ ತಿಮ್ಮಪ್ಪ ಪೂಜಾರಿ ಅವಕಾಶ ಪಡೆದುಕೊಂಡಿದ್ದಾರೆ. ಈ ಪೈಕಿ ಭವಾನಿ ಚಿದಾನಂದ ಎರಡನೆ ಬಾರಿಗೆ ಚುನಾಯಿತರಾಗಿದ್ದು, ಉಳಿದವರು ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಹಿರಿತನದ ಆಧಾರದಲ್ಲಿ ರಾಧಾಕೃಷ್ಣ ಬೋರ್ಕರ್‌ರಿಗೆ ಅಧ್ಯಕ್ಷತೆಗೆ ಅವಕಾಶ ನೀಡಲು ಪಕ್ಷದೊಳಗೆ ನಿರ್ಧಾರವಾಗಿದೆ. 2005ರಲ್ಲಿ ನಡೆದ ತಾಪಂ ಚುನಾವಣೆಯಲ್ಲಿ ಕೋಡಿಂಬಾಡಿ ತಾಪಂ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದ ರಾಧಾಕೃಷ್ಣ ಬೋರ್ಕರ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News