ಪುತ್ತೂರು ಬ್ರಹ್ಮರಥಕ್ಕೆ ಹಾನಿ: ಶಿಲ್ಪಿಯಿಂದ ಪರಿಶೀಲನೆ

Update: 2016-05-06 17:13 GMT

ಪುತ್ತೂರು, ಮೇ 6: ಈ ಬಾರಿ ವಾರ್ಷಿಕ ಜಾತ್ರೋತ್ಸವದ ಸಂದರ್ಭ ಬೆಳಕಿಗೆ ಬಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥದ ಹಾನಿಯನ್ನು ದುರಸ್ತಿ ಮಾಡುವ ಸಂಬಂಧ ಉಡುಪಿ ಮೂಲದ ರಥಶಿಲ್ಪಿ ಸುದರ್ಶನ್ ಶುಕ್ರವಾರ ಪುತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿದರು.

ಬ್ರಹ್ಮರಥದ ಒಂದು ಚಕ್ರಕ್ಕೆ ಹಾನಿ ಉಂಟಾಗಿದ್ದು, ರಥದ ಮೂರು ಪಾರ್ಶ್ವದ ಮೂಲೆಯಲ್ಲಿರುವ ವಿಗ್ರಹಗಳು ಜಜ್ಜಿರುವುದನ್ನು ಅವರು ಪರಿಶೀಲಿಸಿದರು. ಹಾನಿಗೊಂಡ ಚಕ್ರವನ್ನು ರಥದಿಂದ ತೆರವು ಮಾಡಿ ದುರಸ್ತಿ ಮಾಡಬೇಕಾಗಿದೆ. ಹೀಗಾಗಿ ರಥವನ್ನು ಈಗಿರುವ ರಥಬೀದಿಯಲ್ಲೇ ಉಳಿಸಿಕೊಂಡು ಅಲ್ಲೇ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿಯೇ ದುರಸ್ತಿ ಕಾರ್ಯ ಕೈಗೊಂಡರೆ ಉತ್ತಮ ಎಂದು ಅವರು ಈ ಸಂದರ್ಭ ತಿಳಿಸಿದರು.

ಮೂರು ಮೂಲೆಗಳಲ್ಲಿ ಜಜ್ಜಿರುವ ಮೂರ್ತಿಗಳನ್ನು ಅದರಿಂದ ತೆರವು ಮಾಡಿ ಹೊಸದಾಗಿ ಮೂರ್ತಿಗಳನ್ನು ವಿನ್ಯಾಸ ಮಾಡಿ ಅಳವಡಿಸಬಹುದು ಎಂದು ತಿಳಿಸಿದ ಅವರು ಸದ್ಯ ಕಾರ್ಯಬಾಹುಳ್ಯ ಇರುವ ಕಾರಣ ನವೆಂಬರ್ ವೇಳೆಗೆ ದುರಸ್ತಿ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದರು.

ರಥವನ್ನು ರಥಬೀದಿಯಿಂದ ತೆಗೆದು ರಥ ಮಂದಿರ ಸೇರಿಸುವ ಕೆಲಸ ಮಾಡಿದರೆ ಈಗಾಗಲೇ ಹಾನಿಗೊಂಡಿರುವ ರಥಕ್ಕೆ ಇನ್ನಷ್ಟು ಹಾನಿ ಉಂಟಾಗುವ ಸಾಧ್ಯತೆ ಇರುವ ಕಾರಣ ರಥಬೀದಿಯಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲೇ ಉಳಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

ರಥದ ಚಕ್ರ ಮತ್ತಿತರ ಅಗತ್ಯ ಭಾಗಗಳ ಅಳತೆ ಪಡೆದುಕೊಂಡ ಸುದರ್ಶನ್ ಕೆಲಸಕ್ಕೆ ಬೇಕಾದ ಮರದ ಪ್ರಮಾಣದ ಬಗ್ಗೆ ವಿವರ ನೀಡುವುದಾಗಿ ತಿಳಿಸಿದರು. ಅದರ ಪ್ರಕಾರ ಮರದ ಸಂಗ್ರಹ ಮತ್ತು ದುರಸ್ತಿಯ ಖರ್ಚು ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗುತ್ತದೆ.

ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಸಹೋದರ ಕರುಣಾಕರ ರೈ, ರಥ ನಿರ್ಮಾಣ ಸಂದರ್ಭ ಮೇಲುಸ್ತುವಾರಿ ಹೊತ್ತಿದ್ದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ನಗರಸಭಾ ಸದಸ್ಯ ನವೀನ್‌ಚಂದ್ರ ನಾಯ್ಕಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು. ಉದ್ಯಮಿ ಮುತ್ತಪ್ಪ ರೈ ಸುಮಾರು 1 ಕೋಟಿ ರೂ. ವೆಚ್ಚದ ಬ್ರಹ್ಮರಥವನ್ನು 2010ರಲ್ಲಿ ದೇವಳಕ್ಕೆ ದಾನವಾಗಿ ಸಮರ್ಪಣೆ ಮಾಡಿದ್ದರು.

2016ರ ಎಪ್ರಿಲ್ 17ರಂದು ನಡೆದ ರಥೋತ್ಸವಕ್ಕೆ ಒಂದೆರಡು ದಿನಗಳ ಮೊದಲು ರಥದಲ್ಲಿ ಹಾನಿ ಆಗಿರುವುದು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News