ಮನುಷ್ಯನಿಗೆ ತನ್ನ ವ್ಯಕ್ತಿತ್ವದ ಕಲ್ಪನೆ ಇರಬೇಕು: ಡಾ.ಕೃಷ್ಣಪ್ರಸಾದ್

Update: 2016-05-06 17:30 GMT

ಪುತ್ತೂರು, ಮೇ 6: ನಮ್ಮ ವ್ಯಕ್ತಿತ್ವವನ್ನು ನಮ್ಮ ಆಂತರ್ಯದ ಕನ್ನಡಿಯಿಂದ ನೋಡಿಕೊಳ್ಳಬೇಕು. ಯುವಜನರ ಮನಸ್ಸೇ ಆಯುಧವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮನಸ್ಸಿನಿಂದ ವ್ಯಕ್ತಿತ್ವ ರೂಪಿಸಲು ಸಾಧ್ಯವಿದ್ದು, ಮನಸ್ಸಿನಿಂದಲೇ ಕಲ್ಪನೆಯನ್ನು ಸಾಕಾರಗೊಳಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕು. ಒಳಿತು ಕೆಡುಕು ಸಮಾಜದ ಒಂದು ಭಾಗ. ಅದನ್ನು ಯುವಜನರು ವಿಮರ್ಶಿಸಿ ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದು ಸುಳ್ಯದ ಕೆವಿಜಿ ಕಾಲೇಜಿನ ಮೈಕ್ರೋಬಯೋಲಜಿ ಪ್ರಾಧ್ಯಾಪಕ ಡಾ.ಕೃಷ್ಣಪ್ರಸಾದ್.ಎಂ.ಎಸ್. ಹೇಳಿದ್ದಾರೆ.

ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ವತಿಯಿಂದ ಗುರುವಾರ ಆಯೋಜಿಸಲಾದ ಸ್ನಾತಕೋತ್ತರ ದಿನ ಮತ್ತು ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ತನ್ನ ವ್ಯಕ್ತಿತ್ವ ಏನು ಎಂಬ ಕಲ್ಪನೆಯಿರಬೇಕು. ತನ್ನ ಬಗ್ಗೆ ತನಗೇ ಕೀಳರಿಮೆಯಿರಬಾರದು. ಅಲ್ಲದೆ ಜೀವನವನ್ನು ಉತ್ತಮವಾದ ರೀತಿಯಲ್ಲಿ ನಡೆಸಲು ಉತ್ತಮ ಯೋಚನೆಯಿರಬೇಕು. ಜೀವನದಲ್ಲಿ ಯಶಸ್ಸು ಪಡೆಯಲು ಯೋಚನೆಯಿಂದ ಮಾತ್ರ ಸಾಧ್ಯ. ಯೋಚನೆಗಳ ಸರಮಾಲೆ ಸರಿಯಿದ್ದರೆ ವ್ಯಕ್ತಿತ್ವದ ಉನ್ನತಿ ಸಾಧ್ಯ ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು. ಏಳುಬೀಳುಗಳು ಜೀವನದ ಅವಿಬಾಜ್ಯ ಅಂಗ. ಯುವಜನರು ಜೀವನದ ಅಡೆತಡೆಗಳಿಗೆ ಕುಗ್ಗಬಾರದು. ಬದಲಾಗಿ ಯಶಸ್ಸು ಪಡೆಯಲು ಪ್ರಯತ್ನಿಸಬೇಕು ಎಂದರು.

ವಿವೇಕಾನಂದ ಕಾಲೇಜಿನ ಸಂಚಾಲಕ ಎಂ.ಟಿ. ಜಯರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್ಸಿ. ವಿಭಾಗದ ಸಂಯೋಜಕಿ ಸವಿತಾ ಇದ್ದರು. ಎಂ.ಕಾಂ. ವಿಭಾಗ ಮುಖ್ಯಸ್ಥೆ ವಿಜಯ ಸರಸ್ವತಿ ಸ್ವಾಗತಿಸಿದರು.

ಕಾರ್ಯಕ್ರಮದ ಸಂಯೋಜಕಿ ರಕ್ಷಾ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರುತಿ ವಾಸುದೇವ.ಕೆ ಮತ್ತು ಅಪರ್ಣಾ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News