ಸೇದಿ ಎಸೆದ ಬೀಡಿ, ಸಿಗರೇಟ್ ತುಂಡಿನಿಂದ ಬೆಂಕಿಗಾಹುತಿಯಾಯ್ತು 2.5 ಎಕರೆ ಗುಡ್ಡ

Update: 2016-05-07 13:50 GMT

ಉಪ್ಪಿನಂಗಡಿ, ಮೇ 7: ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು ಎರಡೂವರೆ ಎಕರೆ ಗುಡ್ಡ ಪ್ರದೇಶ ಹಾಗೂ ರಬ್ಬರ್ ತೋಟ ಸುಟ್ಟು ಹೋದ ಘಟನೆ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಶನಿವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಬೆದ್ರೋಡಿಯ ರಾಷ್ಟ್ರೀಯ ಹೆದ್ದಾರಿಯ ಬದಿಯ ಸರಕಾರಿ ಗುಡ್ಡದಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿತ್ತು. ಈ ಗುಡ್ಡದಲ್ಲಿ ಒಣಹುಲ್ಲು ಸಾಕಷ್ಟು ಇದ್ದುದರಿಂದ ಕೆಲವೇ ಹೊತ್ತಿನಲ್ಲಿ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಇಡೀ ಗುಡ್ಡವನ್ನೇ ಆಹುತಿ ತೆಗೆದುಕೊಳ್ಳಲು ಮುಂದಾಯಿತು. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಮರದ ಸೊಪ್ಪಿನ ಗೆಲ್ಲುಗಳ ಮೂಲಕ ಬೆಂಕಿ ನಂದಿಸಿದರಾದರೂ, ಅದಕ್ಕೆ ಮಣಿಯದ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿ ಭರಭರನೆ ಉರಿಯುತ್ತಾ ಸಮೀಪದ ಖಾಸಗಿ ರಬ್ಬರ್ ತೋಟಕ್ಕೂ ವ್ಯಾಪಿಸಿತು.

ಕೆಲ ಹೊತ್ತಿನಲ್ಲೇ ಪುತ್ತೂರು ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ, ಸತತ ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಆದಾಗಲೇ ಸುಮಾರು ಎರಡೂವರೆ ಎಕರೆ ಸರಕಾರಿ ಗುಡ್ಡ ಪ್ರದೇಶ ಹಾಗೂ ಖಾಸಗಿ ರಬ್ಬರ್ ತೋಟದ ಸ್ವಲ್ಪಭಾಗ ಬೆಂಕಿಗೆ ಆಹುತಿಯಾಗಿದೆ.

ವಾಹನಗಳಲ್ಲಿ ಹೋಗುವವರು ಯಾರೋ ಸಿಗರೇಟ್ ಅಥವಾ ಬೀಡಿ ಸೇದಿ ಬಿಸಾಡಿರುವುದರಿಂದ ಈ ಬೆಂಕಿ ಅನಾಹುತ ನಡೆದಿದೆ ಎನ್ನಲಾಗಿದೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಜಯಂತ ಬೆದ್ರೋಡಿ, ಗಣೇಶ್ ಕುಲಾಲ್, ಧನಂಜಯ ಬೆದ್ರೋಡಿ, ಉಮೇಶ, ಶೇಖರ, ಬಾಲಕೃಷ್ಣ, ಮೋನಪ್ಪ ಗೌಡ ಹಾಗೂ ಅಗ್ನಿಶಾಮಕದಳದ ಗೋಪಾಲ್, ಕೆ. ನವೀನ್, ಕಿರಣ್, ನಾರಾಯಣ ಗೌಡ, ಕುಶಾಲಪ್ಪ ಗೌಡ, ಅಶೋಕ್ ಸಹಕರಿಸಿದರು.

ಬಜತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News