ಅಬ್ಬಕ್ಕ ಉತ್ಸವದಲ್ಲೂ ಪ್ರತಿಧ್ವನಿಸಿದ ಉಳ್ಳಾಲದ ಕೋಮು ದ್ವೇಷದ ಸಮಸ್ಯೆ

Update: 2016-05-07 16:32 GMT

ಮಂಗಳೂರು, ಮೇ 7: ಅಬ್ಬಕ್ಕ ಉತ್ಸವದಲ್ಲೂ ವೇದಿಕೆಯಲ್ಲಿದ್ದ ಅತಿಥಿಗಳ ಮೂಲಕ ಜಿಲ್ಲೆಯ ನೀರಿನ ಕೊರತೆಯ ಸಮಸ್ಯೆ, ಉಳ್ಳಾಲದ ಕೋಮು ದ್ವೇಷದ ಘಟನೆಗಳ ಮೂಲಕ ಉಂಟಾಗಿರುವ ವಾತಾವರಣದ ವಿಷಯ ಪ್ರಸ್ತಾಪವಾಗುವುದರೊಂದಿಗೆ ಸ್ಥಳೀಯ ಘಟನೆಗಳ ಬಗ್ಗೆ ವೇದಿಕೆಯಿಂದಲೂ ಪ್ರತಿಧ್ವನಿ ಕೇಳಿ ಬಂತು.

ರಾಜ್ಯದಲ್ಲಿ ಬರ ಇದ್ದ ಕಾರಣ ಉತ್ಸವದ ಬಗ್ಗೆ ಟೀಕೆ ಬಂದರೂ ಕೆಲವು ತಿಂಗಳ ಮೊದಲೆ ಕಾರ್ಯಕ್ರಮ ನಿಗದಿಯಾಗಿದ್ದ ಕಾರಣ ಕಾರ್ಯಕ್ರಮ ಮಾಡಬೇಕಾಯಿತು ಎಂದು ಸಂಘಟಕ ಭಾಸ್ಕರ್ ರೈ ಕುಕ್ಕುವಳ್ಳಿ ಪ್ರಸ್ತಾಪಿಸಿದರು.

ಅಬ್ಬಕ್ಕನ ಜಾತ್ಯತೀತ ಹೋರಾಟ ನೆಲೆ ಇರುವ ಊರಲ್ಲಿ ಕೋಮು ದ್ವೇಷದ ವಾತಾವರಣ ಇರುವುದು ವಿಪರ್ಯಾಸ ಎನ್ನುವ ಮಾತನ್ನು ರಾಜ್ಯ ಮಹಿಳಾ ಆಯೋಗದ ಅಅಧ್ಯಕ್ಷೆ ಮಂಜುಳಾ ಮಾನಸ ತಮ್ಮ ಮಾತುಗಳಲ್ಲಿ ತಿಳಿಸಿದರು.

ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ ಮಾತನಾಡುತ್ತಾ, ಮತೀಯ ಸಾಮರಸ್ಯ ಇರಬೇಕು ಎಂದು ಅಬ್ಬಕ್ಕ ಉತ್ಸವ ಆಚರಿಸಲು ಆರಂಭಿಸಿದ ಕಡೆಯೇ ಮತೀಯ ಸಾಮರಸ್ಯ ಕೆಡುತ್ತಿರುವುದು ವಿಪರ್ಯಾಸ ಎಂದು ಸಮಾರಂಭದಲ್ಲಿ ತಿಳಿಸಿದರು.

ಸಚಿವ ಯು.ಟಿ.ಖಾದರ್ ಶಾಂತಿ ಸಾಮರಸ್ಯ ಕಾಪಾಡಲು ಎಲ್ಲರ ಸಹಕಾರ ಅಗತ್ಯ, ಶಾಂತಿ ಕದಡುವ ಕಿಡಿಗೇಡಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು.

ಕಳೆದ 20 ದಿನಗಳಿಂದ ಉಳ್ಳಾಲದ ಕೋಮುದ್ವೇಷದ ಘಟನೆಗೆ ಇಬ್ಬರು ಬಲಿಯಾದ ಕಾರಣದಿಂದ ಉಂಟಾಗಿದ್ದ ವಾತಾವರಣ ಇನ್ನೂ ತಿಳಿಯಾಗಿಲ್ಲ.ರಾತ್ರಿ 6-7 ಗಂಟೆಯಾಗುತ್ತಿರುವಂತೆ ಪೊಲೀಸರು ರಾತ್ರಿ ನಿಷೇದಾಜ್ಞೆ ಜಾರಿಯಲ್ಲಿದೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು ಎಂದು ಎಚ್ಚರಿಕೆ ನೀಡುತ್ತಿದ್ದ ಕಾರಣದಿಂದ ಜನ ಸಂಚಾರ ವಿಲ್ಲದೆ ನಿರ್ಜನ ಪ್ರದೇಶವಾಗಿರುತ್ತಿದ್ದ ತೊಕ್ಕೊಟ್ಟು ಕಲ್ಲಾಪು ಉಳ್ಳಾಲದ ಪರಿಸರ ಶುಕ್ರವಾರ ದಿಂದ ರಾತ್ರಿ 9 ಗಂಟೆಯವರೆಗೂ ಜನ ಸಂಚಾರ ಆರಂಭಗೊಂಡು ಸಹಜ ಸ್ಥಿತಿಗೆ ಮರಳುತ್ತಿದೆ.

ಉಳ್ಳಾಲ ಪರಿಸರದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಶುಕ್ರವಾರ ರಾತ್ರಿ ಹಿಂದಕ್ಕೆ ಪಡೆಯಲಾಗಿತ್ತು. ಈ ನಡುವೆ ಅನಿವಾರ್ಯವಾಗಿ ಮೊದಲೆ ಹಮ್ಮಿಕೊಂಡ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳು ಆತಂಕದ ನಡುವೆ ನಡೆದಿದೆ . ಸಣ್ಣ ಪುಟ್ಟ ಅಂಗಡಿಗಳ ಮಾಲಕರು ವ್ಯಾಪರವಿಲ್ಲದೆ ಸೋತಿದ್ದೇವೆ. ಈ ನಡುವೆ ನೀರಿನ ಸಮಸ್ಯೆ ಉಳ್ಳಾಲ ಪರಿಸರದ ಸಾಕಷ್ಟು ಪ್ರದೇಶವನ್ನು ಗಂಭೀರವಾಗಿ ಕಾಡುತ್ತಿದೆ. ಆ ಕಾರಣದಿಂದ ಮೊದಲ ದಿನ ಅಬ್ಬಕ್ಕ ಉತ್ಸವದ ಬಗ್ಗೆ ಹೆಚ್ಚಿನ ಉತ್ಸಾಹ ಕಂಡು ಬರಲಿಲ್ಲ ಎನ್ನುವುದು ಉಳ್ಳಾಲ ಪರಿಸರದ ಸ್ಥಳೀಯರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News