ದಿನೇ ದಿನೇ ಪ್ರಚಾರ ಪಡೆದುಕೊಳ್ಳುತ್ತಿದೆ ‘ವಾಟ್ಸ್‌ಆ್ಯಪ್ ಬಿಗ್‌ಬಾಸ್’

Update: 2016-05-07 17:05 GMT

ಮಂಜೇಶ್ವರ, ಮೇ 7: ಆಧುನಿಕ ದೃಶ್ಯ ಮಾಧ್ಯಮಗಳನ್ನು ಬಳಸಿ ಸೃಜನಾತ್ಮಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವುದು ಹೆಚ್ಚಾದಷ್ಟು ಬಳಕೆಗೆ ವಿಶೇಷ ಅರ್ಥ ಪ್ರಾಪ್ತಿಯಾಗಿ ಯುವ ಸಮೂಹಕ್ಕೆ ಉತ್ತಮ ಪ್ರೇರಣೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಯತ್ನ ಹಲವು ಮುಖಗಳಲ್ಲಿ ನಡೆಯುತ್ತಿದ್ದು, ‘ನಾವು ನಮ್ಮವರು’ ತಂಡವೂ ಈ  ಪ್ರಯತ್ನದಲ್ಲಿ ತೊಡಗಿದೆ.

ಏನಿದು ನಾವು ನಮ್ಮವರು?

ಪೆರ್ಲದ ಯುವ ಪತ್ರಕರ್ತ ಜಯ ಮಣಿಯಂಪಾರೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಹೊಸ ಪರಿಕಲ್ಪನೆಯೊಡನೆ ವಿವಿಧತೆಯಲ್ಲಿ ಏಕತೆ ನಾವು ನಮ್ಮವರು ಎಂಬ ವಾಟ್ಸ್‌ಆ್ಯಪ್ ಗುಂಪನ್ನು ಸೃಷ್ಟಿಸಿದರು. ಬೆರಳೆಣಿಕೆಯ ಸದಸ್ಯರಿಂದ ಆರಂಭವಾದ ಗುಂಪಲ್ಲಿ ಇಂದು 102ಕ್ಕಿಂತಲೂ ಅಧಿಕ ಸದಸ್ಯರಿದ್ದಾರೆ. ಕವಿಗಳು,ಸಾಹಿತಿಗಳು, ಪತ್ರಕರ್ತರು, ನಾಟಕ, ಯಕ್ಷಗಾನ ಕಲಾವಿದರು, ಕೃಷಿಕರು, ಅಧ್ಯಾಪಕರು, ವೈದ್ಯರು ಹೀಗೆ ಎಲ್ಲಾ ವರ್ಗದ ಜನರು ಗುಂಪಿನಲ್ಲಿದ್ದು, ಭಿನ್ನವಾಗಿ ಕಾರ್ಯಾಚರಿಸುತ್ತಿರುವುದು ಈ ಗುಂಪಿನ ವಿಶೇಷ.

ಬಿಗ್‌ಬಾಸ್ ಮನೆ:

ಈ ಗುಂಪಿನಲ್ಲಿ ಟಿವಿ ರಿಯಾಲಿಟಿ ಶೋ ನೆನಪಿಸುವ ಬಿಗ್ ಬಾಸ್‌ನಂತೆ ಕಾರ್ಯಾಚರಿಸುತ್ತದೆ. ಪ್ರತಿನಿತ್ಯ ಮುಂಜಾನೆ ದೇವರ ಸ್ಮರಣೆ, ನಿತ್ಯಪಂಚಾಂಗ, ದಿನದ ವಿವಿಧ ಕಾರ್ಯಕ್ರಮಗಳ ಪರಿಚಯ ಸೂಚಿ, ಹೊಸ ರುಚಿ, ಕಥಾ ಲೋಕ ಮೊದಲಾದವುಗಳು ಪ್ರಸ್ತುತಗೊಂಡು ಬೆಳಗ್ಗೆ 10 ಗಂಟೆಯ ಸುಮಾರಿಗೆ ಗ್ರೂಪ್ ಎಡ್ಮಿನ್ ದಿನದ ಟಾಸ್ಕ್‌ನ್ನು ಗುಂಪಿಗೆ ನೀಡುತ್ತಾರೆ. ಇಲ್ಲಿ ಪ್ರತಿದಿನ ವೈವಿಧ್ಯಮಯವಾದ ಚರ್ಚೆ, ಸಮಾಲೋಚನೆ, ವಿವಿಧ ವಿಷಯಗಳ ಮೇಲೆ ಕವಿತೆ, ಕಥೆ ರಚನೆ, ಪ್ರಬಂಧ ಮೊದಲಾದವುಗಳು ಹಂಚಲ್ಪಡುತ್ತದೆ. ಎಲ್ಲಾ ವಿಷಯಗಳು ಸೃಜನಾತ್ಮಕವಾಗಿದ್ದು, ಬೇರೆ ಗುಂಪಿನಿಂದ ಕದಿಯುವುದಾಗಲಿ, ಈ ಗುಂಪಿಂದ ಇತರ ಗುಂಪಿಗೆ ಹಂಚುವುದಾಗಲಿ ನಿಷಿದ್ಧವಾಗಿದೆ. ಜೊತೆಗೆ ಕೈಕಾಲು ಸಂಜ್ಞೆ (ಎಮೋಜಿ)ಗಳನ್ನು ಬಳಸುವುದರ ಮೇಲೆ ನಿರ್ಬಂಧಗಳಿವೆ. ಸಂಜೆ 7 ಗಂಟೆಗೆ ದಿನದ ಟಾಸ್ಕ್ ಕೊನೆಗೊಂಡು ಬಳಿಕ ಟಾಸ್ಕ್‌ನ ಬಗ್ಗೆ ಚರ್ಚೆ, ವಿಚಾರ ವಿನಿಮಯಗಳಿರುತ್ತವೆ. ಹೀಗೆ ದಿನಪೂರ್ತಿ ವೈವಿಧ್ಯಮಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಈ ಗುಂಪಿನಲ್ಲಿ ಶೇ.90 ಸದಸ್ಯರು ಚಟುವಟಿಕೆಯಿಂದ ಗುಂಪನ್ನು ಮುನ್ನಡೆಸುತ್ತಿದ್ದಾರೆ.

ವಾರದ ಕೊನೆಗೆ ವಾರದ ಒಟ್ಟು ಟಾಸ್ಕ್ ಮತ್ತು ಗುಂಪಿನ ಕಾರ್ಯಚಟುವಟಿಕೆ, ಸದಸ್ಯರ ಪಾಲ್ಗೊಳ್ಳುವಿಕೆಯ ಬಗ್ಗೆ ಗುಂಪನ್ನು ಸದಾ ಗಮನಿಸುವ ತಜ್ಞ ಸದಸ್ಯರ ತಂಡವೊಂದು ಎಡ್ಮಿನ್‌ಗೆ ವರದಿ ನೀಡಿ ಮುಂದಿನ ವಾರದ ಚಟುವಟಿಕೆಯ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಗುಂಪಲ್ಲಿ ಅಶಿಸ್ತು, ಗುಂಪಿನ ನಿರ್ಣಯಗಳಿಗೆ ವಿರುದ್ದವಾಗಿ ಕಾರ್ಯಾಚರಿಸುವವರನ್ನು ವಾರಕ್ಕೊಮ್ಮೆ ಹೊರ ಹಾಕುವ ಪ್ರಕ್ರಿಯೆಗಳೂ ನಡೆಯುತ್ತಿವೆ.

ಈ ವಾಟ್ಸ್‌ಆ್ಯಪ್ ಗುಂಪಿನ ಚಟುವಟಿಕೆಗಳನ್ನು ಗಮನಿಸಿ ಈಗಾಗಲೇ ಕರ್ನಾಟಕದ ಹಲವು ಮೂಲೆಗಳಿಂದ ಹಲವರು ಗುಂಪಿಗೆ ಸೇರಿದ್ದಾರೆ ಮತ್ತು ಇನ್ನು ಹಲವರು ಸೇರ್ಪಡೆಗೆ ಕಾಯುತ್ತಿದ್ದಾರೆ.

ಮುಂದಿನ ಚಟುವಟಿಕೆ: ಗುಂಪಿನಲ್ಲಿ ಪ್ರಕಟಗೊಂಡ ಅತ್ಯುತ್ತಮ ಕಥೆ, ಕವನ, ಪ್ರಬಂಧ, ಅಡುಗೆ ರೆಸಿಪಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸುವ ಗುರಿ ಇದೆ ಎಂದು ಗುಂಪಿನ ಎಡ್ಮಿನ್ ಪತ್ರಿಕೆಗೆ ತಿಳಿಸಿದ್ದಾರೆ.

ಗುಂಪಿನಲ್ಲಿ ಹಿರಿಯ ಶಿಕ್ಷಕ, ಕವಿ ಹ.ಸು.ಒಡ್ಡಂಬೆಟ್ಟು, ಹಿರಿಯ ಛಾಯಾಗ್ರಾಹಕ ಹರ್ಷ ರೈ ಪುತ್ರಕಳ, ಅಖಿಲೇಶ್ ಯಾದವ್, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಸಾಯಿಭದ್ರಾ ರೈ, ಶಿವಶಂಕರ ಪೆರ್ಲ, ಗಣೇಶ್ ಕುಳಮರ್ವ, ಗಂಗಾಧರ ಪಳ್ಳತ್ತಡ್ಕ, ನಾಟಕ ಕಲಾವಿದರಾದ ಉದಯ ಸಾರಂಗ್, ನಾ.ಪಿ.ಪೆರಡಾಲ, ಚಲನಚಿತ್ರ ಕಲಾವಿದರಾದ ರಾಜೇಶ್ ಮುಗುಳಿ, ಪ್ರಕಾಶ್ ಕೆ.ತೂಮಿನಾಡು, ವಿ.ಕೆ.ಕಡಬ್ಜೆ, ಪಿ.ತೂಮಿನಾಡು, ಹಿರಿಯ ಕವಿ ಹರೀಶ್ ಪೆರ್ಲ, ಡಾ.ಶಂಕರನಾರಾಯಣ ಭಟ್, ಅನು ಪ್ರಬಾಕರ್, ರಾಜಶ್ರೀ ಟಿ.ರೈ, ಭಗತ್ ಗಣೇಶ್, ವಿದ್ಯಾ ಗಣೇಶ್, ಅಕ್ಷರ, ಮಣಿಪ್ರಸಾದ್, ರಾಮ್ ಕಲ್ಲಡ್ಕ, ಡಾ.ನವೀನ್ ಮರಿಕೆ ಮೊದಲಾದವರ ಬೃಹತ್ ತಂಡ ಮುನ್ನಡೆಸುತ್ತಿದೆ.

Writer - ಆರಿಫ್ ಮಚ್ಚಂಪಾಡಿ

contributor

Editor - ಆರಿಫ್ ಮಚ್ಚಂಪಾಡಿ

contributor

Similar News