ಉಡುಪಿ ಪೌರಾಯುಕ್ತರ ಅಮಾನತಿಗೆ ದಸಂಸ ಆಗ್ರಹ

Update: 2016-05-07 17:55 GMT

ಉಡುಪಿ, ಮೇ 7: ನಗರಸಭೆಯ ಭ್ರಷ್ಟಚಾರವನ್ನು ಮರೆಮಾಚಲು ದಲಿತ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ತಪ್ಪುಮಾಹಿತಿ ನೀಡಿದ ಪೌರಾಯುಕ್ತ ರನ್ನು ತಕ್ಷಣ ಅಮಾನತುಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಕ್ತಾರ ಜಯನ್ ಮಲ್ಪೆಒತ್ತಾಯಿಸಿದ್ದಾರೆ.
ವಡಭಾಂಡೇಶ್ವರ ವಾರ್ಡಿನ ನೆರ್ಗಿ ಪ್ರದೇಶದ ದಲಿತ ಕಾಲನಿಯ ಮಧ್ಯೆ ವಸತಿ ಸಮುಚ್ಚಯಕ್ಕೆ ಅನುಮತಿ ನೀಡಲಾಗಿದೆ ಎಂದು ತಪ್ಪುತಿಳಿದು ನಗರಸಭೆಗೆ ಶ್ರದ್ಧಾಂಜಲಿಯ ಫ್ಲೆಕ್ಸ್ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದಕ್ಕೆ ಯಾವುದೇ ಪರವಾನಿಗೆ ನೀಡಿಲ್ಲ ಎನ್ನುವ ಆಯುಕ್ತರಿಗೆ ತಿರುಗೇಟು ನೀಡಿರುವ ಜಯನ್ ಮಲ್ಪೆ ಈ ಕುರಿತ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದಾರೆ. 2015ರ ಸೆ.2ರಂದು ವಡಬಾಂಡೇಶ್ವರ ವಾರ್ಡಿನ ದಲಿತ ಕಾಲನಿಯಲ್ಲಿ ಮೂರು ಮಹಡಿಗಳ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿರುವ ಕೆ. ಗೋಪಾಲಕೃಷ್ಣ ಆಚಾರ್‌ಗೆ ಪರವಾನಿಗೆ ಸಂಬಂಧ ಅಭಿವೃದ್ಧಿ ಶುಲ್ಕ 18,663 ರೂ, ಪರವಾನಿಗೆ ಶುಲ್ಕ 20,750 ರೂ. ಮತ್ತು ಕಾರ್ಮಿಕ ಶುಲ್ಕ 1,12,500 ರೂ.ವನ್ನು ಪಾವತಿಸುವಂತೆ ಆದೇಶಿಸಿ ಪೌರಾಯುಕ್ತ ಪತ್ರ ಬರೆದಿದ್ದನ್ನು ಮರೆತಿದ್ದಾರೆಯೇ ಎಂದು ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ.
ಒಂದು ವೇಳೆ ತಾವು ಹೇಳಿದ್ದೇ ನಿಜವಾಗಿದ್ದು, ದಕ್ಷ ಅಧಿಕಾರಿಯಾದರೆ ನೆರ್ಗಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ವಸತಿ ಸಮುಚ್ಚಯ ಕಟ್ಟುತ್ತಿರುವ ಹಾಗೂ ನಗರಸಭೆಯ ಚರಂಡಿಯಲ್ಲೇ ಸ್ಲಾಬ್‌ಹಾಕಿ ಮುಚ್ಚಿಸುತ್ತಿರುವ ಕೆ.ಜಿ.ಆಚಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.
ಪೌರಾಯುಕ್ತರಿಗೆ ನೈತಿಕತೆಯಿದ್ದರೆ ತಾವು ಸಲ್ಲಿಸಿರುವ ಮಾಹಿತಿ ಹಕ್ಕಿನ ಅರ್ಜಿಗೆ ಸಂಬಂಧಿಸಿದ ದಾಖಲೆಗಳನ್ನು ತಕ್ಷಣ ನೀಡಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಮೆರೆಯಲಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News