ಮೌಲಾನ ಇ.ಎಂ. ಶಾಫಿ ನಿಧನ

Update: 2016-05-09 03:13 GMT

ಮೂಡುಬಿದಿರೆ, ಮೇ 8: ‘ಶಾಫಿ ಮೌಲಾನ’ ಎಂದೇ ಚಿರಪರಿಚಿತರಾಗಿದ್ದ ಮೂಡುಬಿದಿರೆಯ ಪುತ್ತಿಗೆ ನಿವಾಸಿ ಮೌಲಾನ ಇಬ್ರಾಹೀಂ ಮುಹಮ್ಮದ್ ಶಾಫಿ ಸಾಹೇಬ್‌ (80) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ಅಲಂಗಾರು ಸಮೀಪದ ಕಾನದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೌಲಾನ ಇಬ್ರಾಹೀಂ ಮುಹಮ್ಮದ್ ಶಾಫಿ ಅವರು, ಕುದ್ರೋಳಿಯ ಜಾಮಿಯಾ ಮಸೀದಿ (ಜೋಡುಪಳ್ಳಿ)ಯಲ್ಲಿ ಖತೀಬರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಆ ಬಳಿಕ ಗಂಜಿಮಠ, ಬೈಲೂರು ಮತ್ತು ಆದಿಉಡುಪಿಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದರು. 1982ರಲ್ಲಿ ಮೂಡುಬಿದಿರೆಯ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ಖತೀಬರಾಗಿ ಸೇವೆ ಪ್ರಾರಂಭಿಸಿದ ಅವರು, ಸುಮಾರು ಮೂರು ದಶಕಗಳ ಕಾಲ ಖತೀಬರಾಗಿದ್ದರು. ಅವರು ಉರ್ದು, ಅರೆಬಿಕ್ ಹಾಗೂ ಪರ್ಶಿಯನ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಸೇವೆ ಸಲ್ಲಿಸಿದ್ದ ಎಲ್ಲೆಡೆ ಸರ್ವ ಧರ್ಮಗಳ ಜನರ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಅವರು ಪಾತ್ರರಾಗಿದ್ದರು. 

ಮೃತರು ಪತ್ನಿ, ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ವಿಶ್ವಾಸ್ ಬಾವ ಬಿಲ್ಡರ್ಸ್‌ನ ಅಬ್ದುಲ್ ರವೂಫ್ ಪುತ್ತಿಗೆ ಹಾಗೂ ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್ ಪುತ್ತಿಗೆ ಸಹಿತ ಐವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವು ಪುತ್ತಿಗೆಯ ನೂರಾನಿ ಮಸೀದಿ ವಠಾರದಲ್ಲಿ ಸೋಮವಾರ ಲುಹರ್ ನಮಾಝ್‌ನ ಬಳಿಕ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಸಂತಾಪ: ಮೌಲಾನ ಇಬ್ರಾಹೀಂ ಮುಹಮ್ಮದ್ ಶಾಫಿ ಅವರ ನಿಧನಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News