ಪಳ್ಳಿಗುಡ್ಡೆ ನಿವಾಸಿಗಳ ನೀರಿನ ಬವಣೆ ಕೇಳುವವರಿಲ್ಲ!

Update: 2016-05-08 18:51 GMT

ಮುಲ್ಕಿ, ಮೇ 8: ಇಲ್ಲಿನ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಪಳ್ಳಿಗುಡ್ಡೆ ಪರಿಸರದ ಜನತೆಯ ದೈನಂದಿನ ಕಾರ್ಯಗಳಿಗೂ ನೀರಿಲ್ಲದೆ ಪರಿತಪಿಸುವಂತಾಗಿದ್ದು, ಗ್ರಾಪಂಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಭಾಗದಲ್ಲಿ ಸುಮಾರು 55ರಿಂದ 60 ಮನೆಗಳಿವೆ. ಬೆರಳೆಣಿಕೆಯಷ್ಟು ಮನೆಗಳಲ್ಲಿ ಬಾವಿಗಳಿವೆಯಾದರೂ ಬೇಸಿಗೆ ಆರಂಭವಾಗುತ್ತಲೇ ನೀರು ಇಂಗಿಹೋಗುತ್ತವೆ. ಆ ಬಳಿಕ ಎಲ್ಲ ಮನೆಗಳಿಗೂ ಸುಮಾರು 3 ವರ್ಷಗಳ ಹಿಂದೆ ಶಾಸಕರ ಅನುದಾನದಲ್ಲಿ ಕೊರೆಸಲಾಗಿರುವ ಒಂದೇ ಒಂದು ಬೋರ್‌ವೆಲ್ ನೀರಿನ ಬವಣೆಯನ್ನು ನೀಗಿಸಬೇಕಿದೆ. 2004ರಲ್ಲಿ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಯ ಫಲವಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಳೆದೆರಡು ವರ್ಷಗಳ ಹಿಂದೆ ನೀರಿನ ಸಮಸ್ಯೆ ಹೆಚ್ಚಾಗಿದ್ದಾಗ ತೋಕೂರು ದೇವಸ್ಥಾನ ಪರಿಸರದಲಿನ್ಲ ವಿಶ್ವಬ್ಯಾಂಕ್ ನಿರ್ಮಿಸಿಕೊಟ್ಟಿದ್ದ ಬೋರ್‌ವೆಲ್‌ನಿಂದ ಟ್ಯಾಂಕಿಗೆ ನೀರು ಹರಿಸಿ ಬಳಿಕ ಪಳ್ಳಿಗುಡ್ಡೆ ಪರಿಸರಕ್ಕೆ ಹಂಚುವ ಬಗ್ಗೆ ಚಿಂತನೆ ನಡೆಸಿ ಪೈಪ್‌ಲೈನ್ ಮಾತ್ರ ಮಾಡಿ ಗ್ರಾಪಂ ಮೋಸಮಾಡಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪರಿಸರದಲ್ಲಿ ಎರಡು ಸರಕಾರಿ ಬಾವಿಗಳಿದ್ದು ಅದರಲ್ಲಿಯೂ ಅಲ್ಪಸ್ವಲ್ಪನೀರಿದೆ. ಆದರೆ, ಬಾವಿ ತುಂಬಾ ಕಸಕಡ್ಡಿಗಳು ತುಂಬಿರುವುದರಿಂದ ಆ ನೀರು ಕುಡಿಯಲು ಅಥವಾ ಬೇರೆ ಯಾವುದೇ ಕೆಲಸಗಳಿಗೆ ಯೋಗ್ಯವಾಗಿಲ್ಲ. ಬಾವಿಗಳ ಪುನಶ್ಚೇತನಕ್ಕೆ ಗ್ರಾಪಂ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಂದಾ ಎತ್ತಿ ಬೋರ್‌ವೆಲ್ ದುರಸ್ತಿ:ಈ ಪರಿಸರದಲ್ಲಿರುವ ಒಂದೇ ಒಂದು ಬೋರ್‌ವೆಲ್ ಕೆಟ್ಟುಹೋದರೆ ಇಲ್ಲಿನ ಜನರಿಗೆ ನೀರಿನ ಬದಲಿ ವ್ಯವಸ್ಥೆ ಇಲ್ಲ. ಅಲ್ಲದೆ ಬೋರ್‌ವೆಲ್ ಕೊರೆಸಿದಂದಿನಿಂದ ಇಂದಿನವರೆಗೂ ಗ್ರಾಪಂ ಆಡಳಿತ ತಿರುಗಿಯೂ ಈ ಕಡೆ ನೋಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ನಾವೇ ಮನೆ ಮನೆಯಿಂದ ಚಂದಾ ಎತ್ತಿ ಬೋರ್‌ವೆಲ್ ದುರಸ್ತಿಮಾಡಬೇಕಾದ ದುಸ್ಥಿತಿ ಬಂದೊದಗಿದೆ ಎಂದು ದೂರಿದ್ದಾರೆ.
ನೀರು ಕೇಳಿದರೆ ಕೇವಲ ಪೈಪ್‌ಲೈನ್ ಭಾಗ್ಯ: ಪಳ್ಳಿಗುಡ್ಡೆ ಪರಿಸರದಲ್ಲಿ ನಿತ್ಯ ದೈನಂದಿನ ಕಾರ್ಯಗಳಿಗೆ ನೀರು ಇಲ್ಲದಿದ್ದರೂ ಈವರೆಗೆ ಮೂರು ಬಾರಿ ಪೈಪ್‌ಲೈನ್ ಮಾಡಿ ಸರಕಾರದ ಹಣ ದುರುಪಯೋಗ ಪಡಿಸಲಾಗಿದೆ ಎಂದು ಆರೋಪಿಸಿರುವ ಸ್ಥಳೀಯರು, ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆಯ ಮೂಲಕ ಪೈಪ್‌ಲೈನ್ ಹಾಕಿ ನೀರು ನೀಡಲಾಗುತ್ತಿತ್ತು. ಅದು ಸ್ಥಗಿತಗೊಂಡ ಬಳಿಕ ವಿಶ್ವಬ್ಯಾಂಕ್ ತೋಕೂರು ಪರಿಸರದಲ್ಲಿ ಕೊರೆಸಿದ್ದ ಬೋರ್‌ವೆಲ್‌ನಿಂದ ನೀರು ನೀಡುವ ಬಗ್ಗೆ ಚಿಂತಿಸಿ ಮತ್ತೆ ಪೈಪ್‌ಲೈನ್ ಮಾಡಲಾಯಿತು. ಆ ಬಳಿಕ ಎರಡು ವರ್ಷಗಳ ಹಿಂದೆ ಜಿಪಂ ವತಿಯಿಂದ ನೀರುಣಿಸುವ ಬಗ್ಗೆ ಮಾತುಗಳು ನಡೆದು ಮತ್ತೊಮ್ಮೆ ಪೈಪ್‌ಲೈನ್ ಮಾಡಲಾಯಿತು. ಆದರೆ ಈವರೆಗೂ ಸಮರ್ಪಕವಾಗಿ ಪಂಚಾಯತ್ ಆಗಲೀ, ಜನಪ್ರತಿನಿಧಿಗಳಾಗಲಿ ನೀರು ನೀಡುವ ಗೋಜಿಗೆ ಹೋಗಿಲ್ಲ ಎಂದು ಜನತೆ ದೂರಿದ್ದಾರೆ. ಪ್ರತಿ ದಿನ ಎಲ್ಲ ಮನೆಗಳಿಗೆ ಕೇವಲ ಅರ್ಧಗಂಟೆ ಮಾತ್ರ ನೀರು ಸಿಗುತ್ತದೆ ಎಂದು ದೂರುವ ಗ್ರಾಮಸ್ಥರು, ಕೆಲ ದಿನಗಳ ಹಿಂದೆ ಟ್ಯಾಂಕರ್‌ವೊಂದರಲ್ಲಿ ನೀರು ತಂದು ರಸ್ತೆ ಬದಿಯ ಕೆಲವು ಮನೆಗಳಿಗಷ್ಟೇ ನೀಡಿದೆ ಎನ್ನುತ್ತಾರೆ.
ಜೀವನ ದುಸ್ತರ:ಪ್ರತೀ ದಿನ 5-6 ಬಿಂದಿಗೆಯಷ್ಟು ನೀರು ಸಿಗುತ್ತದೆ. ಆ ನೀರನ್ನೇ ಬಟ್ಟೆ ಒಗೆಯಲು, ಕುಡಿಯಲು ಸೇರಿದಂತೆ ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳಬೇಕಿದೆ. ಮನೆಯಲ್ಲಿ ಸದಸ್ಯರು ಹೆಚ್ಚಾಗಿದ್ದರೆ ಅಂತವರ ವ್ಯಥೆ ಹೇಳತೀರದಂತಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ ನೀರು ಇಂಗಿಸುವ ಮತ್ತು ಅಣೆಕಟ್ಟುಗಳಿಗೆ ಕಟ್ಟೆಕಟ್ಟಿ ನೀರು ನಿಲ್ಲಿಸಿದರೆ ಸ್ವಲ್ಪಪ್ರಮಾಣದಲ್ಲಿ ನೀರಿನ ಬವಣೆ ನೀಗಿಸಬಹುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬಂದರೆ ನೀರಿನ ಸಮಸ್ಯೆಗಳು ಸಂಪೂರ್ಣ ಪರಿಹಾರ ಕಾಣಲಿದೆ. ಕಾಮಗಾರಿ ಶೀಘ್ರ ನಡೆದು ಸಮಸ್ಯೆ ಬೇಗ ಪರಿಹಾರ ಕಾಣಲಿದೆ.
                -ಮೋಹನ್‌ದಾಸ್, ಪಡುಪಣಂಬೂರು ಗ್ರಾಪಂ ಅಧ್ಯಕ್ಷ.

ಪಳ್ಳಿಗುಡ್ಡೆ ಪರಿಸರದಲ್ಲಿ ಓಪನ್‌ವೆಲ್ ನಿರ್ಮಿಸಿದರೆ ನೀರಿನ ಸಮಸ್ಯೆ ಕೊಂಚಮಟ್ಟಿಗೆ ಪರಿಹಾರ ಕಾಣಲು ಸಾಧ್ಯ. ಆದರೆ, ಗ್ರಾಪಂ ಅಥವಾ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ.
                        -ವಾಹಿದ್ ಸಾಹೇಬ್, ಗ್ರಾಮಸ್ಥ.

Writer - -ರಹ್ಮಾನ್ ಹಳೆಯಂಗಡಿ

contributor

Editor - -ರಹ್ಮಾನ್ ಹಳೆಯಂಗಡಿ

contributor

Similar News