ದ.ಕ.ದಲ್ಲಿ ದ್ವಿದಳ ಧಾನ್ಯ ಬೆಳೆ ಕುಂಠಿತ: ಮುಂಗಾರು ಮಳೆ ಆಶ್ರಿತ ಬೆಳೆಗೆ ಸಮಸ್ಯೆ

Update: 2016-05-08 18:54 GMT

ಮಂಗಳೂರು, ಮೇ 8: ಜಿಲ್ಲೆಯಲ್ಲಿ ಈ ಬಾರಿ ಉಂಟಾಗಿರುವ ನೀರಿನ ಕೊರತೆಯಿಂದಾಗಿ ದ್ವಿದಳ ಧಾನ್ಯದ ಬೆಳೆಯಲ್ಲಿ ಕುಂಠಿತವಾಗಿದೆ. ಮೇ ತಿಂಗಳಲ್ಲಿ ಮಳೆಯಾಗದೇ ಇದ್ದರೆ ಮುಂದಿನ ಖಾರೀಫ್ ಬೆಳೆಗೂ ಸಮಸ್ಯೆಯಾಗಲಿದೆ ಎಂದು ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾರ್ಷಿಕ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಹುರುಳಿ, ಅಲಸಂಡೆ ಮೊದಲಾದವುಗಳನ್ನು ಬೆಳೆಯಲಾಗುತ್ತಿತ್ತು.
 
ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ 1,850 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 172 ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ, 721 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 534 ಹೆಕ್ಟೇರ್ ಪ್ರದೇಶದಲ್ಲಿ ಅಲಸಂಡೆ ಬೆಳೆಯಲಾಗುತ್ತಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಎರಡು ವರ್ಷಗಳ ಹಿಂದೆ ಸುಮಾರು 3,277 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯಲಾಗುತ್ತಿತ್ತು. ಕಳೆದ ವರ್ಷ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆ ಬೆಳೆಯಲಾಗಿದೆ.

ಈ ಬಾರಿ ಕೆಲವು ಪ್ರದೇಶದಲ್ಲಿ ಬಿತ್ತನೆಯಾಗದೆ ಇರುವುದರಿಂದ ಈ ಪ್ರಮಾಣ ಸಾಕಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಭತ್ತದ ಕಟಾವು ಮುಗಿದ ಬಳಿಕ ದ್ವಿದಳ ಧಾನ್ಯ ಬೆಳೆಯಲಾಗುತ್ತದೆ. ಈ ಸಂದರ್ಭದಲ್ಲಿ ಬರುವ ಮಳೆಯೂ ಅನುಕೂಲವಾಗುತ್ತದೆ. ಈ ಬಾರಿ ಜನವರಿಯಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಎಪ್ರಿಲ್ ತಿಂಗಳ ವೇಳೆಗೆ ಮತ್ತಷ್ಟು ಗಂಭೀರವಾಗಿತ್ತು. ಹೆಚ್ಚಿನ ಕೃಷಿಕರು ಈ ಬಾರಿ ನೀರಿನ ಕೊರತೆಯಿಂದಾಗಿ ದ್ವಿದಳ ಧಾನ್ಯ ಬೆಳೆಗೆ ಮುಂದಾಗಲಿಲ್ಲ. ಮೇ ತಿಂಗಳಲ್ಲಿಯೂ ಮಳೆಯಾಗದೆ ಇದ್ದರೆ ಮುಂದಿನ ಮಳೆ ಆಧಾರಿತ ಬೆಳೆಗೆ ಸಮಸ್ಯೆಯಾಗಲಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಈ ಅವಧಿಯಲ್ಲಿ 94 ಮಿ.ಮೀ.ಗಿಂತ ಅಧಿಕ ಮಳೆ ಸುರಿದಿದೆ. ಮಳೆಗಾಲದ ಆರಂಭದ ಸಂದರ್ಭದಲ್ಲಿ ಮುಂಗಾರಿನ ಆರಂಭದ ಬೆಳೆ ಸಕಾಲದಲ್ಲಿ ಬೆಳೆಯಲು ಸಹಾಯ ವಾಗುತ್ತಿತ್ತು. ಈ ಬಾರಿ ಮೇ ತಿಂಗಳಲ್ಲಿ ಮಳೆಯಾಗದೆ ಇದ್ದರೆ ಜಿಲ್ಲೆಯ ಮುಂಗಾರಿನಲ್ಲಿ ಆರಂಭಗೊಳ್ಳುವ ಕೃಷಿ ಚಟುವಟಿಕೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News