ನೀರಿನ ಬರ, ಬಿಸಿಲ ಝಳ - ಕಾರ್ಕಳ ಹೊರತಲ್ಲ

Update: 2016-05-09 18:36 GMT

ಕಾರ್ಕಳ, ಮೇ 9: ರಾಜ್ಯದೆಲ್ಲೆಡೆ ತೀವ್ರ ಜಲಕ್ಷಾಮದ ಕೂಗು ಕೇಳಿಸುತ್ತಿದೆ. ಎಂದೂ ನೀರಿನ ಬರ ಕಾಣದ ಕರಾವಳಿ ಜಿಲ್ಲೆಯ ಪಶ್ಚಿಮ ಘಟ್ಟದಂಚಿನ ಕಾರ್ಕಳ ತಾಲೂಕಿಗೂ ಕೂಡಾ ಈ ಬಾರಿ ಬರದ ದವಡೆಗೆ ಸಿಕ್ಕ ಅನುಭವವಾಗಿದೆ. ತಾಲೂಕಿನ ಅನೇಕ ಕಡೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದ್ದು ಇನ್ನು ಕೃಷಿ ತೋಟಗಳಿಗೆ ನೀರು ಹಾಯಿಸುವ ಮಾತು ದೂರವೇ ಸರಿ. ಸೋಮೇಶ್ವರ, ಆಗುಂಬೆ ಕಾಡುಗಳನ್ನು ಚಾರ್ಮಾಡಿ ಘಾಟಿ ಕಾಡುಗಳಿಗೆ ಜೋಡಿಸುವ ರಾಜ್ಯ ಹೆದ್ದಾರಿ ಎಡಭಾಗದ ಪಶ್ಚಿಮ ಘಟ್ಟದ ಹಸಿರು ತಪ್ಪಲಲ್ಲಿ ಕೂಡಾ ನೀರಿನ ಒರತೆ ನಿಧಾ ನಕ್ಕೆ ಆರಿ ಹೋಗುತ್ತಿದೆ. ರಸ್ತೆಯ ಬಲಭಾಗದ ಗ್ರಾಮ ಗಳಲ್ಲಿ ನೀರಿಗೆ ಬರ ಉಂಟಾಗುವ ಸಂಭವವಿದೆ ಎಂದು ತಪ್ಪಲು ಗ್ರಾಮದಲ್ಲಿನ ಜನ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.

   ಮಿಯಾರು ಹೊಳೆ, ಸಾಣೂರಿನ ಶಾಂಭವಿ, ತೆಳ್ಳಾರಿನ ದೊಡ್ಡ ಹೊಳೆಗಳಲ್ಲಿ ನೀರಿನ ಹರಿವು ನಿಂತು ಹೋಗಿದ್ದು, ಗುಂಡಿಗಳಲ್ಲಿ ನಿಂತ ಒರತೆ ಬಿಟ್ಟರೆ ಮಿಕ್ಕೆಲ್ಲ ಕಡೆ ನೀರಿನ ಹನಿಯೂ ಕಾಣದೆ ಪರಿಸ್ಥಿತಿಯ ಗಂಭೀರತೆ ತೋರಿದೆ. ತಾಲೂಕಿನಲ್ಲಿನ ಕೆರೆ-ಕಟ್ಟೆ, ತೋಡುಗಳು ನೀರಿಲ್ಲದೆ ಸಂಪೂರ್ಣ ಬರಿದಾಗಿದ್ದು ಕೃಷಿ ತೋಟಗಳಿಗೆ ನೀರು ಹಾಯಿ ಸುವ ಕೆಲಸ ಈಗ ನಿಂತು ಹೋಗಿದೆ. ನೀರಿನ ಅಭಾವದಿಂದ ಅಡಿಕೆ ತೋಟಗಳು ಒಣಗಿ ಮರದ ಗರಿಗಳು ಬಾಡಿ ಸುಟು ್ಟ ಹಾಳಾಗುತ್ತಿರುವುದು ತೋಟಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಜನರು ಕಿಲೋಮೀಟರ್ ದೂರದಿಂದ ಕೊಡ ಗಳಲ್ಲಿ ನೀರು ಹೊತ್ತು ತರುವುದು, ಸೈಕಲ್‌ಗಳಲ್ಲಿ ಕೊಡಪಾನಗಳ ಮೂಲಕ ನೀರು ತರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಕೂಲಿ ಕೆಲಸಕ್ಕೆ ಹೋಗುವ ಮುನ್ನ ನೀರು ತುಂಬುವ ಹೆಚ್ಚು ವರಿ ಕೆಲಸ ಬಡವರ್ಗದ ಜನರ ದೈನಂದಿನ ಚಟುವಟಿಕೆಯಾಗಿ ಮಾರ್ಪಟ್ಟಿದೆ. ಸಿರಿವಂತರಂತೂ ನೀರಿನ ಟ್ಯಾಂಕರ್‌ಗಳಿಗೆ ಮೊರೆ ಹೋದರೆ ನೀರು ತಂದು ಕೊಡುವ ಟ್ಯಾಂಕರ್‌ಗಳಿಗೂ ನೀರು ಸಿಗದೆ ಬರದ ಬಿಸಿ ತಟ್ಟುತ್ತಿದೆ. ಒಂದೆಡೆ ಜನರು ನೀರಿಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದರೆ ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳಲಿಕ್ಕಾಗಿ ಯಥೇಷ್ಟ ನೀರಿರುವ ಬೋರ್‌ವೆಲ್‌ಗಳ ಮುಂದೆ ಕಾಯುತ್ತಿರುವುದು ಕಾಣಬಹುದಾಗಿದೆ.
ಏರುತ್ತಿರುವ ತಾಪಮಾನ
ನೀರಿನ ತತ್ವಾರ ಒಂದೆಡೆಯಾದರೆ ದಿನಂಪ್ರತಿ ಏರುತ್ತಿರುವ ತಾಪಮಾನ ಜನರ ನಿದ್ದೆಗೆಡಿಸಿದೆ. ತಾಪಮಾನ ನಿಯಂತ್ರಣದಲ್ಲಿರುತ್ತಿದ್ದರೆ ಮಳೆ ಯಾಗುವುದು ಒಂದೆರಡು ವಾರ ತಡವಾದರೂ ನಡೆಯುತ್ತಿತ್ತು. ಆದರೆ ತಾಪ ಮಾನದಲ್ಲಿ ತೀವ್ರ ಏರಿಕೆ ಆಗುತ್ತಿರುವುದರಿಂದ ಮಣ್ಣಿನಲ್ಲಿರುವ ತೇವಾಂಶ ಆರಿ ಹೋಗಿ ಕೆರೆಬಾವಿಗಳಲ್ಲಿ ಅಲ್ಪಸ್ವಲ್ಪಇರುವ ಕುಡಿವ ನೀರಿನ ಮೇಲೂ ಪರಿಣಾಮ ಬೀರಿದೆ.
ಮುಂಡ್ಲಿ ಜಲಾಶಯ ಖಾಲಿ ಖಾಲಿ
ಕಾರ್ಕಳ ನಗರಕ್ಕೆ ನೀರು ಹಾಯಿಸುವ ಕಾರ್ಕಳ ತೆಳ್ಳಾರು ಗ್ರಾಮದಲ್ಲಿನ ಮುಂಡ್ಲಿ ಹೊಳೆ ಜಲಾಶಯ ಬತ್ತಿ ಹೋಗುವ ಲಕ್ಷಣ ಕಾಣುತ್ತಿದ್ದು, ಬಹುತೇಕ ನೀರು ನಿಂತು ಹೋಗುವ ಹಂತದಲ್ಲಿದೆ.ಲಕ್ಷ ಜನ ಸಂಖ್ಯೆ ಇರುವ ಕಾರ್ಕಳ ನಗರಕ್ಕೆ ನೀರು ಒದಗಿಸುವ ಜಲಾಶಯ ಇದಾಗಿದ್ದು, ಇದು ಬತ್ತಿ ಹೋದಲ್ಲಿ ಕಾರ್ಕಳ ನಗರದ ಜನ ನೀರಿಲ್ಲದೆ ತೀವ್ರ ಬವಣೆ ಅನುಭವಿಸುವುದು ಖಚಿತ. ಕಾರ್ಕಳ ನಗರದ 23 ವಾರ್ಡ್‌ಗಳ ಪೈಕಿ ಎತ್ತರ ಸ್ಥಳಗಳಾದ ಬಂಗ್ಲೆ ಗುಡ್ಡೆ, ಜರಿಗುಡ್ಡೆ, ಕಾಬೆಟ್ಟು, ಹವಾಲ್ದಾರ್ ಬೆಟ್ಟು, ಪತ್ತೊಂಜಿಕಟ್ಟೆ, ಬೋರ್‌ಗುಡ್ಡೆ ಮುಂತಾದ ವಾರ್ಡುಗಳಲ್ಲಿ ಈಗಾಗಲೇ ನೀರಿನ ಹಾಹಾಕಾರ ತಲೆದೋರಿದೆ. ಕಾರ್ಕಳದಲ್ಲಿ 3 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದ್ದು ಕುಡಿವ ನೀರಿನ ಪರದಾಟ ಕಂಡು ಬಂದಿದೆ.
ವಾಣಿಜ್ಯ ಸಂಕೀರ್ಣ ವಸತಿ ಗೃಹ, ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಸಂಗ್ರಹಣ ವ್ಯವಸ್ಥೆ ಇರು ವುದರಿಂದ ಸರಬರಾಜಾಗುವ ನೀರು ದೊಡ್ಡ ಪ್ರಮಾಣದಲ್ಲಿ ಕೆಲವೇ ಮಂದಿಯ ಪಾಲಾಗುತ್ತಿದೆ. ಮಾತ್ರವಲ್ಲ ನೀರನ್ನು ಬೇಕಾಬಿಟ್ಟಿ ಬಳ ಸುತ್ತಿದ್ದು ಅನೇಕರು ತಮ್ಮ ಹಿತ್ತಲಿನ ಕೃಷಿ ಕಾರ್ಯಗಳಿಗೂ ಬಳಸುವ ಕಾರಣ ಬಡವರು ಕುಡಿಯಲೂ ನೀರಿಲ್ಲದೆ ಸಂಕಟ ಪಡುವಂತಾಗಿದೆ.


ನೀರಿನ ಅಪವ್ಯಯಕ್ಕೆ ತಡೆ ಅಗತ್ಯ: ಪುರ ಸಭಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ನಿರೀಕ್ಷೆ
ಾರ್ಕಳ ನಗರಕ್ಕೆ ಪ್ರತಿದಿನ ಹತ್ತು ಲಕ್ಷ ಗ್ಯಾಲನ್ ನೀರು ಸರಬರಾಜಾಗುತ್ತಿದೆ. ಈ ಪೈಕಿ ದೊಡ್ಡ ಪ್ರಮಾಣದ ನೀರು ಕಟ್ಟಡ ಕಾಮಗಾರಿಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ, ಹೋಟೆಲ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತಿರುವುದು ಗೊತ್ತಾಗಿದೆ. ಅನೇಕ ಮಂದಿ ಕೃಷಿ ತೋಟಗಳಿಗೂ ಕುಡಿವ ನೀರನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ನೇಕರು ನೀರು ಲಭ್ಯವಿರುವ ಸಮಯದಲ್ಲಿ ಪ್ರತ್ಯೇಕ ಸಂಗ್ರಹ ವ್ಯವಸ್ಥೆಗೆ ನೀರು ಹರಿಸಿ ಇಟ್ಟುಕೊಳ್ಳುವುದಲ್ಲದೆ ಕುಡಿಯಲು ಅನ ಧಿಕೃತವಾಗಿಯೂ ನೀರನ್ನು ಎತ್ತಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನೀರಿನ ಬಳಕೆಯಲ್ಲಿನ ಮೇಲೆ ಪುರ ಸಭಾಡಳಿತ ಕಟ್ಟುನಿಟ್ಟಿನ ನಿಗಾ ವಹಿಸುವುದರ ಜತೆಗೆ ವಿವಿಧ ರೀತಿಯಲ್ಲಿ ನೀರು ಪೋಲಾಗುತ್ತಿರುವುದನ್ನು ತಡೆಯಬೇಕಾಗಿದೆ ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.


ಮಳೆ ಬಾರದಿದ್ದಲ್ಲಿ ತೊಂದರೆ: ತಹಶೀಲ್ದಾರ್ ಈಗಾಗಲೇ ಐದು ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮುಖಾಂತರ ನೀರು ಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಮಳೆ ಬಾರದಿದ್ದರೆ, ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಕಾಡುವುದು ಖಚಿತ ಎನ್ನುತ್ತಾರೆ ತಹಶೀಲ್ದಾರ್ ಎಸ್. ರಾಘವೇಂದ್ರ. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಪರ್ಯಾಯ ಕ್ರಮ ಕೈಗೊಳ್ಳುವ ಅಧಿಕಾರ ಆಯಾಯ ಗ್ರಾಪಂಗಳ ಪಿಡಿಒಗಳಿಗಿದೆ. ಅವರು ಯಾವುದೇ ಅನುದಾನವನ್ನು ಕುಡಿಯುವ ನೀರಿಗಾಗಿ ಬಳಕೆ ಮಾಡಬಹುದಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಾಧಿಸದಂತೆ ಎಚ್ಚರಿಕೆ ಕ್ರಮವನ್ನು ಈಗಾಗಲೇ ತಾಲೂಕಿನ ಆಡಳಿತ ಕೂಡಾ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Writer - ಮುಹಮ್ಮದ್ ಶರೀಫ್ ಕಾರ್ಕಳ

contributor

Editor - ಮುಹಮ್ಮದ್ ಶರೀಫ್ ಕಾರ್ಕಳ

contributor

Similar News