ಬೆಂಗಳೂರಿನಲ್ಲಿ ಮೃತಪಟ್ಟ ಉಪ್ಪಿನಂಗಡಿ ಮೂಲದ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

Update: 2016-05-10 13:26 GMT

ಉಪ್ಪಿನಂಗಡಿ, ಮೇ 10: ಮೇ 8ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಹತ್ತಿರ ಟಿಪ್ಪರ್ ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸೀತಾರಾಮ್ ಕೆ.ಎಸ್. (38) ಎಂಬವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಮೃತ ಸೀತಾರಾಮ್‌ರ ಸ್ಪಷ್ಟ ವಿಳಾಸ ಲಭಿಸಿಲ್ಲ. ತಾನು ಉಪ್ಪಿನಂಗಡಿ ಪರಿಸರದ ನಿವಾಸಿ ಎಂದೂ, ಉಪ್ಪಿನಂಗಡಿಯಿಂದ ಬೇರೊಂದು ಬಸ್ಸನ್ನೇರಿ ತನ್ನ ಊರಿಗೆ ಹೋಗಬೇಕಾಗುತ್ತದೆ ಎಂದೂ, ತಾನು ಮಹಿಳಾ ಹೋಂ ಗಾರ್ಡ್ ಓರ್ವಳನ್ನು ವಿವಾಹವಾಗಿದ್ದು, ಆಕೆ ತೀರಿ ಹೋಗಿರುತ್ತಾಳೆಂದೂ, ತನ್ನ ಮನೆಯಲ್ಲಿ ಮತ್ತು ಊರಿನಲ್ಲಿ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯುತ್ತಿರುತ್ತದೆ ಎಂದು ತನ್ನ ಸ್ನೇಹಿತರಲ್ಲಿ ತಿಳಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ನಿಖರ ವಿಳಾಸ ತಿಳಿದಿರುವುದಿಲ್ಲ.ಮೃತರ ವಾರಸುದಾರರು ಪತ್ತೆಯಾಗದ ಕಾರಣ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಶೈತ್ಯಾಗಾರದಲ್ಲಿಡಲಾಗಿದೆ.

ಮೃತರ ಚಹರೆ ಇಂತಿದೆ: ಎತ್ತರ- 5.6 ಅಡಿ ಎತ್ತರ, ದೃಢಕಾಯ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಬೆಂಗಳೂರು ಮೆಟ್ರೋದಲ್ಲಿ ಹೌಸ್ ಕೀಪಿಂಗ್ ಸೂಪರ್‌ವೈಸರ್ ಆಗಿ ಮತ್ತು ಯಶವಂತಪುರದ ಆರಾಧನಾ ವೆಜ್ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೃತರ ಮೊಬೈಲ್ ಸಂಖ್ಯೆ 8183943127.  ಹಾಲಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ವಾಸವಾಗಿದ್ದು, ತಂದೆಯ ಹೆಸರು ಶಿವಣ್ಣ ಮತ್ತು ತಾಯಿಯ ಹೆಸರು ಹೊನ್ನಮ್ಮ ಎಂದು ತಿಳಿದುಬಂದಿದೆ.

ಮೃತರ ವಾರಸುದಾರರು ಇದ್ದಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ದೂ.ಸಂ.:22943009, 9480801921, 22943030ನ್ನು ಸಂಪರ್ಕಿಸಬಹುದು ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪಿಎಸ್ಸೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News