ಸೌದಿ ಜೈಲಿನಲ್ಲಿದ್ದ ಇನ್ನೋರ್ವ ಮಂಗಳೂರು ಯುವಕನ ಬಿಡುಗಡೆ

Update: 2016-05-10 13:52 GMT

ಮಂಗಳೂರು, ಮೇ 9: ಸೌದಿ ಅರೇಬಿಯಾದ ಜಿದ್ದಾ ಜೈಲಿನಲ್ಲಿ 13 ವರ್ಷಗಳಿಂದ ಬಂಧನದಲ್ಲಿದ್ದ ನಗರದ ಸ್ಟೇಟ್‌ಬ್ಯಾಂಕ್ ನೆಲ್ಲಿಕಾಯಿ ರಸ್ತೆ ಬಳಿಯ ನಿವಾಸಿ ಅಬ್ದುಲ್ ನಾಸಿರ್ ಎಂಬವರು ಇಂದು ಮುಂಜಾನೆ ತಾಯ್ನೆಡಿಗೆ ಮರಳಿದ್ದಾರೆ.

2003ರಲ್ಲಿ ನಡೆದಿದ್ದ ಎನ್ನಲಾದ ಹುಂಡಿ ಕರೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸೌದಿ ಅರೇಬಿಯಾದ ಟೆಲಿಕಾಂ ಕಂಪೆನಿಯು ಒಟ್ಟು 8 ಮಂದಿಯನ್ನು ಬಂಧಿಸಿತ್ತು. ಅಲ್ಲದೆ, ಇವರ ಮೇಲೆ ಭಾರೀ ಪ್ರಮಾಣದಲ್ಲಿ ದಂಡವನ್ನು ವಿಧಿಸಿತ್ತು. ಉಳ್ಳಾಲದ ಫೈರೋಝ್ ಮತ್ತು ಬಜ್ಪೆಯ ರಿಯಾಝ್ ಎಂಬವರು ರವಿವಾರ ತಾಯ್ನೆಡಿಗೆ ಮರಳಿದ್ದರೆ, ಉಳಿದ ಐವರು ಈ ಹಿಂದೆಯೇ ಬಿಡುಗಡೆಗೊಂಡಿದ್ದರು. ಶರೀಫ್ ಕಣ್ಣೂರು ಎಂಬಾತ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ.

ರವಿವಾರ ಮುಂಜಾನೆ ಜೈಲಿನಿಂದ ಬಿಡುಗಡೆಗೊಂಡು ಪೂರ್ವಾಹ್ನ 11ಕ್ಕೆ ವಿಮಾನವನ್ನೇರಿದ ನಾಸಿರ್ ಸಂಜೆ ದಿಲ್ಲಿ ತಲುಪಿದ್ದರು. ಅದೇ ದಿನ ದಿಲ್ಲಿಯಿಂದ ವಿಮಾನ ಮೂಲಕ ಹೊರಟು ಅವರು ಸೋಮವಾರ ಬೆಂಗಳೂರಿಗೆ ಬಂದು ಬಳಿಕ ಅಲ್ಲಿಂದ ಹೊರಟು ಮಂಗಳವಾರ ಮುಂಜಾನೆ ಸುಮಾರು 5 ಗಂಟೆ ಹೊತ್ತಿಗೆ ಮನೆಗೆ ತಲುಪಿದ್ದಾರೆ.

‘ನಾಲ್ಕು ಬಾರಿ ದಿಲ್ಲಿಗೆ ಅಲೆದಾಟ ನಡೆಸಿದ್ದೆವು’

ತನ್ನ ಮಗನ ಬಿಡುಗಡೆಗಾಗಿ ನಾಲ್ಕು ಬಾರಿ ದಿಲ್ಲಿಗೆ ಹೋಗಿ ಬಂದಿದ್ದೇನೆ ಎಂದು ನಾಸಿರ್‌ರ ತಂದೆ ಎ.ಕೆ.ಮುಹಮ್ಮದ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್.ಎಂ.ಕೃಷ್ಣ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ಮೂರು ಬಾರಿ ಅವರ ಬಳಿ ತೆರಳಿದ್ದೆವು. ಸೌದಿಯ ಕಾನೂನಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಿದ್ದಾರೆ. ಅಲ್ಲಿನ ಕಾನೂನು ಪ್ರಕ್ರಿಯೆ ಪ್ರಕಾರ ವಿಚಾರಣೆ ನಡೆದು ಬಿಡುಗಡೆಯಾಗಬೇಕಾಗಿದೆ. ಸೌದಿಯಲ್ಲಿರುವ ಭಾರತೀಯ ಸಂಘ, ಸಂಸ್ಥೆಗಳನ್ನು ಸಂಪರ್ಕಿಸುವಂತೆ ಎಸ್.ಎಂ.ಕೃಷ್ಣ ಸಲಹೆ ನೀಡಿದ್ದರು.

ಇದಾದ ಬಳಿಕ ಸಚಿವ ಸಲ್ಮಾನ್ ಖುರ್ಷಿದ್‌ರನ್ನು ಭೇಟಿ ಮಾಡಿದ್ದೆವು. ನಿಮ್ಮ ಆದಾಯ ಕನಿಷ್ಠ ಆಗಿರುವುದರಿಂದ ಈ ಬಗ್ಗೆ ಆದಾಯದ ಪ್ರಮಾಣ ಪತ್ರವನ್ನು ತಂದುಕೊಂಡುವಂತೆ ತಿಳಿಸಿದ್ದರು. ಅದರಂತೆ ನಾವು ಪ್ರಮಾಣ ಪತ್ರವನ್ನು ಕಳುಹಿಸಿ ಕೊಟ್ಟಿದ್ದೆವು. ಪ್ರಮಾಣ ಪತ್ರವನ್ನು ಸಿಕ್ಕಿದ ಬಗ್ಗೆ ಹಾಗೂ ಅದನ್ನು ಸೌದಿಗೆ ಕಳುಹಿಸಿಕೊಟ್ಟಿರುವುದಾಗಿ ಭಾರತೀಯ ರಾಯಬಾರಿ ಕಚೇರಿಯಿಂದ ನಮಗೆ ಪತ್ರವೊಂದು ಬಂದಿತ್ತು. ಇವೆಲ್ಲಾ ಸುಮಾರು ಏಳೆಂಟು ವರ್ಷಗಳ ಹಿಂದೆ ನಡೆಸಿದ ಪ್ರಯತ್ನವಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News