ಹೊಳೆಯಲ್ಲಿ ಮುಳುಗಿ ಯುವಕನ ಸಂಶಯಾಸ್ಪದ ಸಾವು: ಗುತ್ತಿಗೆದಾರರ ವಿರುದ್ಧ ಆಕ್ರೋಶ

Update: 2016-05-10 16:28 GMT

ಮುಲ್ಕಿ, ಮೇ 10:ಉಡುಪಿ ಜಿಲ್ಲೆಯ ಮಣಿಪಾಲದ ಹೇರ್ಗ ಬಾಗದಿಂದ ಹಾವಂಜೆ-ಕೀಳಂಜೆ ಪ್ರದೇಶಕ್ಕೆ ಸರ್ವೆಗೆಂದು ತೆರಳಿದ್ದ ಇಬ್ಬರು ಯುವಕರ ಪೈಕಿ ಓರ್ವ ಹೊಳೆಯಲ್ಲಿ ನೀರು ಪಾಲಾಗಿದ್ದ ಕಿನ್ನಿಗೋಳಿಯ ಯುವಕನ ಶವ ಪತ್ತೆಯಾಗಿದೆ.

ಯುವಕನನ್ನು ಕಿನ್ನಿಗೋಳಿ ಕಮ್ಮಾಜೆ ನಿವಾಸಿ ಸಂದೀಪ್ ಕುಲಾಲ್‌ ಎಂದು ಗುರುತಿಸಲಾಗಿದೆ.

ಯುವಕ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು ಮಣಿಪಾಲ ಮೂಲದ ವೈದ್ಯರು ಕಂಪನಿಯವರಿಗೆ ಬೇಕಾದಂತೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಯುವಕನ ಕಡೆಯವರು ಆರೋಪಿಸಿದ ಪರಿಣಾಮ ಕಿನ್ನಿಗೋಳಿಯಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.

ಮೃತ ಸಂದೀಪ್ ಕುಲಾಲ್ ಕಿನ್ನಿಗೋಳಿಯ ದಾಮಸ್‌ಕಟ್ಟೆ ಮೂಲದ ಸಿಲ್ವರ್‌ಸ್ಟಾರ್ ಮಿರಾಂಡ ಒಡೆತನದ ಮಿಲೇನಿಯಮ್ ಗ್ಲೋಬಲ್ ಸರ್ವೇ ಕಂಪೆನಿಯಲ್ಲಿ ಸರ್ವೆಯರ್‌ನ ಅಸಿಸ್ಟೆಂಟ್ ಆಗಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.

ಸಂದೀಪ್ ಕುಲಾಲ್ ಸೋಮವಾರ ಕಂಪೆನಿಯ ಸರ್ವೇ ಕೆಲಸಕ್ಕೆಂದು ಹಾವಂಜೆ-ಕೀಳಂಜೆ ಭಾಗಕ್ಕೆ ಸರ್ವೆಯರ್ ಉದಯ ಪೂಜಾರಿ ಜೊತೆ ತೆರಳಿದ್ದರು. ಅಲ್ಲಿ ಸರ್ವೇ ಮಾಡಲು ಹೊಳೆಯ ಇನ್ನೊಂದು ಭಾಗಕ್ಕೆ ತೆರಳಲು ದೋಣಿ ಇಲ್ಲದ ಕಾರಣ ಈಜುತ್ತಾ ದಡ ಸೇರುವ ದುಸ್ಸಾಹಸಕ್ಕೆ ಹೋಗಿ ನೀರು ಪಾಲಾಗಿದ್ದರು. ಆದರೆ, ಉದಯಕುಮಾರ್‌ನನ್ನು ಸ್ಥಳೀಯರು ಬದುಕಿಸಿದ್ದು, ಸಂದೀಪ್ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.

ಗುತ್ತಿಗೆದಾರರ ವಿರುದ್ಧ ಆಕ್ರೋಶ

ಮೃತ ಸಂದೀಪ್ ಅಧಿಕಾರಿಗಳ ನಿರ್ಲ್ಯಕ್ಷದಿಂದ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಹಾಗೂ ಸಂಬಂಧಿಕರು, ಮಣಿಪಾಲದ ವೈದ್ಯರು ಕಂಪನಿಯವರಿಗೆ ಬೇಕಾದಂತೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ಶವದ ಎದುರು ಪ್ರತಿಭಟನೆ ನಡೆಸಿದರು.

ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.ಮೃತರಿಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಗ್ಲೋಬಲ್ ಕಂಪೆನಿಯ ಅಧಿಕಾರಿಗಳು ಉಢಾಪೆಯಾಗಿ ವರ್ತಿಸುತ್ತಿದ್ದಾರೆ. ಕೂಡಲೇ ಕಂಪೆನಿಯ ಅಧಿಕಾರಿಗಳು ಮೃತರ ಮನೆಗೆ ಬಂದು ಸಾಂತ್ವನ ಹೇಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳಿಕ ಮಾಜಿ ಜಿಪಂ ಸದಸ್ಯರೊಬ್ಬರು ಸಂಧಾನ ಮಾಡಿ ಕಂಪೆನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಹೇಳಿ ಪರಿಹಾರ ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ನಡುವೆ ಅಧಿಕಾರಿಗಳು ಸ್ಥಳಕ್ಕೆ ಬಂದ ಕೂಡಲೇ ಸ್ಥಳೀಯರಿಗೂ ಅಧಿಕಾರಿಗಳಿಗೂ ಮಾತಿನ ಚಕಮಕಿಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News