ಮೇ 14ರಿಂದ ಮಣಿಪಾಲ ಹೆರಿಟೇಜ್ ವಿಲೇಜ್‌ಗೆ ಸಾರ್ವಜನಿಕರಿಗೆ ಪ್ರವೇಶ

Update: 2016-05-10 16:33 GMT

ಉಡುಪಿ, ಮೇ 10: ಮಣಿಪಾಲದ ಹಸ್ತಶಿಲ್ಪ ಟ್ರಸ್ಟ್ ಮೂಲಕ ಸರಕಾರ ನೀಡಿದ ಆರು ಎಕರೆ ಜಾಗದಲ್ಲಿ ಮಣ್ಣಿಪಳ್ಳ ಪಕ್ಕದಲ್ಲಿ ನಿರ್ಮಾಣಗೊಂಡಿರುವ ‘ಮಣಿಪಾಲ ಹೆರಿಟೇಜ್ ವಿಲೇಜ್’ (ಮಣಿಪಾಲ ಕಲಾಗ್ರಾಮ) ಮೇ 14ರಿಂದ ಸಾರ್ವಜನಿಕರ ಸಂದರ್ಶನಕ್ಕೆ ತೆರೆದುಕೊಳ್ಳಲಿದೆ ಎಂದು ಕಲಾಗ್ರಾಮದ ನಿರ್ಮಾಣದಲ್ಲಿ ಅಹರ್ನಿಶಿ ದುಡಿದ ಟ್ರಸ್ಟ್‌ನ ಕಾರ್ಯದರ್ಶಿ ವಿಜಯನಾಥ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಲಾಗ್ರಾಮದಲ್ಲಿ ನಿರ್ಮಾಣಗೊಂಡಿರುವ 28 ಪಾರಂಪರಿಕ ಮನೆ, ಮಂದಿರ, ಮಠ, ಕಟ್ಟಡ, ಗ್ಯಾಲರಿ, ಮ್ಯುಸಿಯಂಗಳ ಪೈಕಿ ಎಂಟು ಕಟ್ಟಡಗಳನ್ನು ಹಾಗೂ ಓಪನ್ ಏರ್ ಮ್ಯುಸಿಯಂ ಒಂದನ್ನು ಸಂಪೂರ್ಣವಾಗಿ ವೀಕ್ಷಿಸಲು ಅವಕಾಶವಿದೆ. ಉಳಿದವುಗಳ ಪೈಕಿ 14 ಕಟ್ಟಡಗಳನ್ನು ಹೊರಗಿನಿಂದಲೇ ತೋರಿಸಿ ಅವುಗಳ ವಿವರಣೆ ನೀಡಲಾಗುವುದು. ಮುಂದೆ ಅವುಗಳ ಕಾರ್ಯ ಪೂರ್ಣಗೊಂಡ ಬಳಿಕ ಅವುಗಳನ್ನು ಸಹ ತೋರಿಸಲು ನಿರ್ಧರಿಸಲಾಗಿದೆ.

ಪ್ರಾಯೋಗಿಕವಾಗಿ ಮೇ 14ರಿಂದ 31ರವರೆಗೆ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶ ನೀಡಲಾಗುವುದು. ಮಳೆಗಾಲದ ಮೂರು ತಿಂಗಳು ಕಲಾಗ್ರಾಮ ಮುಚ್ಚಿರುತ್ತದೆ. ಸೆಪ್ಟಂಬರ್ ತಿಂಗಳ ಬಳಿಕ ಮತ್ತೆ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ದಿನದಲ್ಲಿ ಎರಡು ತಂಡಗಳಿಗೆ ಬೆಳಗ್ಗೆ ಮತ್ತು ಅಪರಾಹ್ನ ಕಲಾಗ್ರಾಮ ಭೇಟಿಗೆ ಅವಕಾಶ ನೀಡಲಾಗುವುದು. ಬೆಳಗ್ಗೆ 10ರಿಂದ 12ರವರೆಗೆ ಹಾಗೂ ಅಪರಾಹ್ನ 3ರಿಂದ 5ರವರೆಗೆ. ಪ್ರತಿ ತಂಡದಲ್ಲಿ 15 ಜನಕ್ಕೆ ಮಾತ್ರ ಅವಕಾಶ. 12 ವರ್ಷ ಕೆಳಗಿನ ಮಕ್ಕಳಿಗೆ ಅವಕಾಶವಿಲ್ಲ.

ಪ್ರವೇಶ ಆನ್‌ಲೈನ್ ಬುಕ್ಕಿಂಗ್ ಮೂಲಕ ಮಾತ್ರ. ಪ್ರತಿ ಟಿಕೇಟಿನ ಬೆಲೆ 500ರೂ. ಆಸಕ್ತರು www.in.bookmyshow.comನಲ್ಲಿ ಮೊದಲೇ ಟಿಕೆಟ್ ಬುಕ್ ಮಾಡಬೇಕು. ಕಲಾಗ್ರಾಮದಲ್ಲಿ ಟಿಕೆಟ್ ಮಾರಾಟ ಇರುವುದಿಲ್ಲ. ಆನ್‌ಲೈನ್ ಬುಕ್ಕಿಂಗ್ ಮೇ 12ರಿಂದ ಪ್ರಾರಂಭಗೊಳ್ಳಲಿದೆ ಎಂದು ಹಸ್ತಶಿಲ್ಪದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News