16ನೆ ಅಂತರ್‌ಕಾಲೇಜು ಸಾಂಸ್ಕೃತಿಕ ಯುವಜನೋತ್ಸವ: ಆಳ್ವಾಸ್ ಕಾಲೇಜು ಚಾಂಪಿಯನ್

Update: 2016-05-10 17:47 GMT

ಮೂಡುಬಿದಿರೆ, ಮೇ 10: ಕಳೆದ ನಾಲ್ಕು ದಿನಗಳಿಂದ ವಿದ್ಯಾಗಿರಿಯಲ್ಲಿ ನಡೆಯುತ್ತಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 16ನೆ ಅಂತರ್ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವ ಚಕ್ರವ್ಯೆಹ-2016 ಸ್ಪರ್ಧೆಯಲ್ಲಿ ಆಳ್ವಾಸ್ ತಾಂತ್ರಿಕ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದು ಚಾಂಪಿಯನ್‌ಶಿಪ್‌ನ್ನು ತನ್ನದಾಗಿಸಿಕೊಂಡಿದೆ.

ಬೆಂಗಳೂರಿನ ಎಂ.ಎಸ್. ರಾಮಯ್ಯ ತಾಂತ್ರಿಕ ಕಾಲೇಜು ತಂಡ ಪ್ರಥಮ ರನ್ನರ್ ಅಪ್ ಹಾಗೂ ಬಿಎಂಐಟಿ ಬೆಂಗಳೂರು ತಂಡ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿವೆ.

ಮಂಗಳವಾರ ಮುಕ್ತಾಯಗೊಂಡ ಯುವಜನೋತ್ಸವ ಸ್ಪರ್ಧೆಯಲ್ಲಿ ಸುಳ್ಯ ಕೆವಿಜಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ, ಸ್ಪರ್ಧೆಯ ಸಂಯೋಜಕ ಡಾ. ಜ್ಞಾನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅಭಿರುಚಿಯನ್ನು ಮೂಡಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆಯನ್ನು ಸಾಂಸ್ಕೃತಿಕ ನಗರವನ್ನಾಗಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.

ವಿಟಿಯು ಬೆಳಗಾವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ.ಜೆ. ಬುಜುರ್ಕೆ ಮಾತನಾಡಿ, ಈ ಸಾಂಸ್ಕೃತಿಕ ಉತ್ಸವ ನಡೆಸಲು ಆಳ್ವಾಸ್ ಶಿಕ್ಷಣ ಸಂಸ್ಥೆ ತೋರಿದ ಕಾಳಜಿ ಶ್ಲಾಘನಾರ್ಹ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವಿದ್ಯಾರ್ಥಿಗಳಲ್ಲಿರುವ ಅಗಾಧ ಶಕ್ತಿ ಕಲಾ ಮನಸ್ಸುಗಳನ್ನು ಕಟ್ಟುವುದಕ್ಕೆ ಸದ್ಬಳಕೆಯಾಗಲಿ. ಸಂಸ್ಕೃತಿ ಮತ್ತು ಮನೋರಂಜನೆಯ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದು ಸಲಹೆಯಿತ್ತರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಎಐಇಟಿ ಪ್ರಾಚಾರ್ಯ ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಟಿಯು ವ್ಯಾಪ್ತಿಯ ವಿವಿಧ ಕಾಲೇಜುಗಳ ಒಟ್ಟು 85 ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದವು.

ಪ್ರಾಧ್ಯಾಪಕ ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಿಟಿಯು ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಮೂರ್ತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News