ಬಂಟ್ವಾಳ: ಸುಜ್ಞಾನ ನಿಧಿ ವಿತರಣೆ

Update: 2016-05-10 17:59 GMT

ಬಂಟ್ವಾಳ, ಮೇ 10: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪಾಲುದಾರ ಕುಟುಂಬದ ಮಕ್ಕಳ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಗೊಂಡ ಸುಜ್ಞಾನನಿಧಿ ಶಿಷ್ಯ ವೇತನ ಕಾರ್ಯಕ್ರಮದಡಿ ಪ್ರಸಕ್ತ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 930 ವಿದ್ಯಾರ್ಥಿಗಳಿಗೆ 54,99,600 ರೂ.ನ್ನು ಮಂಗಳವಾರ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಮಾರಂಭವನ್ನು ಉದ್ಘಾಟಿಸಿ ಬಳಿಕ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ವಿತರಿಸಿ ಮಾತನಾಡಿ, ಸರಕಾರದ ಹಲವಾರು ಸೌಲಭ್ಯಗಳಿಂದಾಗಿ ಪ್ರಸಕ್ತ ದಿನಗಳಲ್ಲಿ ದೇಶದಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳಾಗಿದ್ದು, ವಿದ್ಯಾರ್ಥಿಗಳು ಕೂಡಾ ತಮ್ಮ ಜೀವನದ ವೌಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಿಕ್ಷಣ ಸಹಿತ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕಾರ್ಯ ಅಭಿನಂದನೀಯವಾಗಿದೆ ಎಂದ ಸಚಿವರು ಮಾಜಿ ವೀರಪ್ಪ ಮೊಯ್ಲಿಯವರು ಸಿಇಟಿಯನ್ನು ಜಾರಿಗೊಳಿಸಿರುವುದರಿಂದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಪುರಸಬಾಧ್ಯಕ್ಷ ರಾಮಕೃಷ್ಣ ಆಳ್ವ, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಂದಪ್ಪ ಮೂಲ್ಯ, ಯೋಜನಾಧಿಕಾರಿಗಳಾದ ಸುನಿತಾ ನಾಯ್ಕಿ, ರಾಘವ ಎಂ. ಅತಿಥಿಗಳಾಗಿದ್ದರು.

ಸಬಾಧ್ಯಕ್ಷತೆ ವಹಿಸಿದ್ದ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಮಾತನಾಡಿ, ಸುಜ್ಞಾನ ನಿಧಿ ಶಿಷ್ಯ ವೇತನ ಯೋಜನೆಯಡಿ ಪ್ರಸ್ತುತ ವರ್ಷದಲ್ಲಿ ಇಡೀ ರಾಜ್ಯದ ಒಟ್ಟು 8,810 ವಿದ್ಯಾರ್ಥಿಗಳಿಗೆ 5,03,21,200 ರೂ.ನ್ನು ವಿತರಿಸಲಾಗಿದೆ. ರಾಜ್ಯದ ಕುಗ್ರಾಮಗಳಲ್ಲಿರುವ ವಿವಿಧ ಶಾಲೆಗಳಿಗೆ 30 ಕೋಟಿ ರೂ. ವೆಚ್ಚದಲ್ಲಿ 30 ಸಾವಿರ ಪೀಠೋಪಕರಣಗಳನ್ನು ಒದಗಿಸಲಾಗಿದೆ ಎಂದರು.

ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ್ ಶೆಟ್ಟಿ ಸ್ವಾಗತಿಸಿದರು. ಕಾನೂನು ವಿಭಾಗದ ನಿರ್ದೇಶಕ ಸುಧೀರ್ ಕುಮಾರ್ ವಂದಿಸಿದರು. ನವೀನ್, ಮಮತಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News