ರಿಕ್ಷಾ ಫ್ರೀ ಪರ್ಮಿಟ್ ವಿತರಣೆಯಲ್ಲಿ ಅವ್ಯವಹಾರ: ಆರೋಪ

Update: 2016-05-10 18:48 GMT

ಮಂಗಳೂರು, ಮೇ 10: ರಿಕ್ಷಾ ಫ್ರೀ ಪರ್ಮಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಆಟೊ ರಿಕ್ಷಾ ಚಾಲಕರ ಹೋರಾಟ ಸಮಿತಿ ಹಾಗೂ ಫೆಡರೇಶನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್ ವತಿಯಿಂದ ಆರ್‌ಟಿಒ ಚಲೋ ಪ್ರತಿಭಟನೆಯು ನಗರದ ಆರ್‌ಟಿಒ ಕಚೇರಿ ಮುಂಭಾಗ ಮಂಗಳವಾರ ನಡೆಯಿತು. ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸಮಿತಿಯ ಅಧ್ಯಕ್ಷ ಯಾದವ ಮರೋಳಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಗಳಲ್ಲಿ ಮಂಜೂರಾದ ಇತರ ಫಲಾನುಭವಿಗಳಿಗೆ ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಆಟೊ ರಿಕ್ಷಾ ಪರವಾನಿಗೆ ನೀಡುವಂತೆ ಜಿಲ್ಲಾಕಾರಿ ಈ ಹಿಂದಿನ ಅಸೂಚನೆ ಮಾರ್ಪಾಡು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಫಲಾನುಭವಿಗಳು ಯಾವ ಪ್ರದೇಶದಲ್ಲಿ ವಾಸ್ತವ್ಯ ಹೊಂದಿರುತ್ತಾರೋ ಅಲ್ಲಿಯೇ ಅವರಿಗೆ ದುಡಿಯಲು ಪರವಾನಿಗೆ ನೀಡಬೇಕೆಂದು ನಿಯಮವಿದ್ದರೂ ಉಳ್ಳಾಲ, ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಮಂಗಳೂರಿನಲ್ಲಿ ದುಡಿಯಲು ಪರವಾನಿಗೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು. ಮಂಗಳೂರು ನಗರ ವ್ಯಾಪ್ತಿಯ ವಲಯ-1ರಲ್ಲಿ ಇಲ್ಲಿಯವರೆಗೆ 680 ಅರ್ಜಿದಾರರು ಫ್ರೀ ಪರ್ಮಿಟ್‌ಗೆ ಅರ್ಜಿ ಸಲ್ಲಿಸಿದ್ದು, 590 ಮಂದಿ ಪರವಾನಿಗೆ ಪಡೆದುಕೊಂಡಿದ್ದಾರೆ. ಇನ್ನು ಉಳಿದ 90 ಮಂದಿಗೆ ಮಂಜೂರಾತಿ ಆದೇಶವನ್ನು ಮಾತ್ರ ನೀಡಲಾಗಿದೆ. ಇದರಲ್ಲಿ ಕೊರಗ ಸಮುದಾಯದ ಕೇವಲ 8 ಮಂದಿಗೆ ಮಾತ್ರ ಪರವಾನಿಗೆ ದೊರೆತಿರುವುದು ಬಿಟ್ಟರೆ ಉಳಿದವುಗಳನ್ನು ಈಗಾಗಲೇ ಪರವಾನಿಗೆ ಹೊಂದಿರುವವರಿಗೆ, ಸರಕಾರಿ ಉದ್ಯೋಗದಲ್ಲಿರುವವರಿಗೆ, ಆರ್ಥಿಕವಾಗಿ ಪ್ರಬಲವಾಗಿರುವವರಿಗೆ ನೀಡಲಾಗಿದೆ. ಇದರಿಂದ ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಅನ್ಯಾಯವಾಗಿದ್ದು, ಲಕ್ಷಾಂತರ ರೂ. ಅವ್ಯವಹಾರವೂ ನಡೆದಿದೆ. ಈ ಕುರಿತು ತನಿಖೆ ನಡೆಸದಿದ್ದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು.

ದ.ಕ. ಜಿಲ್ಲಾ ಆಟೊ ರಿಕ್ಷಾ ಚಾಲಕರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸುಮಾರು 6,000ದಷ್ಟು ಆಟೊ ರಿಕ್ಷಾಗಳು ನಗರಾದ್ಯಂತ ಸಂಚರಿಸುತ್ತಿದ್ದು, ಅವುಗಳಿಗೆ ಸರಿಯಾದ ಪಾರ್ಕಿಂಗ್ ಸ್ಥಳವಿಲ್ಲದೆ ಹಲವಾರು ರಿಕ್ಷಾ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು. ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪ್ರಭಾರ ಸಾರಿಗೆ ಆಯುಕ್ತ ಜಿ.ಎಸ್. ಹೆಗ್ಡೆ ಅಹವಾಲು ಸ್ವೀಕರಿಸಿ, ಈ ಬಗ್ಗೆ ಜಿಲ್ಲಾಕಾರಿಗಳ ಗಮನಕ್ಕೆ ತರುವುದಾಗಿ ಆಶ್ವಾಸನೆ ನೀಡಿದರು.
ಈ ವೇಳೆ ಲೋಕೇಶ್ ಶೆಟ್ಟಿ, ಯೋಗೇಂದ್ರ ಕೆ., ಸಂದೀಪ್ ಬಾಬುಗುಡ್ಡ, ಲಿಂಗಪ್ಪ ನಂತೂರು, ಮುಹಮ್ಮದ್ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News