15 ದಿನಗಳವರೆಗೆ ಕಟ್ಟಡ ಕಾಮಗಾರಿಗಳಿಗೆ ನೀರು ಸ್ಥಗಿತ: ಜಿಲ್ಲಾಧಿಕಾರಿ

Update: 2016-05-11 13:18 GMT

ಮಂಗಳೂರು, ಮೇ11: ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಈಗಾಗಲೇ ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿರುವಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮನಪಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸಣ್ಣ ಮನೆಗಳ ನಿರ್ಮಾಣ ಕಾಮಗಾರಿ ಹೊರತು ಪಡಿಸಿ ನಗರದಲ್ಲಿ ನಡೆಯುತ್ತಿರುವ ಎಲ್ಲಾ ಬಹುಮಹಡಿ ಕಟ್ಟಡಗಳ ಕಾಮಗಾರಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕೆಂದು ನಿರ್ದೇಶಿಸಿದರು.

ನೀರಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಪರೀಕ್ಷಾ ಅವಧಿಯನ್ನು ಗಮನ ಹರಿಸಿಕೊಂಡು ಕಾಲೇಜು ಹಾಸ್ಟೆಲ್‌ಗಳಲ್ಲಿ ರಜೆ ಘೋಷಣೆಗೆ ಪರಿಶೀಲಿಸುವುದಾಗಿಯೂ ಹೇಳಿದರು. ನಗರದ ಎಲ್ಲಾ ಖಾಸಗಿ ಸೇರಿದಂತೆ ತೆರೆದ ಬಾವಿ, ಬೋರ್‌ವೆಲ್‌ಗಳನ್ನು ಗುರುತಿಸಿ ಸಮಗ್ರ ಮಾಹಿತಿಯನ್ನು ನಾಳೆ (ಮೇ 12) ಸಂಜೆಯೊಳಗೆ ನೀಡುವಂತೆ ಮನಪಾ ಆಯುಕ್ತರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ನಗರದ 60 ವಾರ್ಡ್‌ಗಳಲ್ಲಿಯೂ ವಾರ್ಡ್‌ಗೊಂದರಂತೆ ಟ್ಯಾಂಕರ್, ಇಂಜಿನಿಯರ್ ಹಾಗೂ ಬೋರ್‌ವೆಲ್‌ನ್ನು ಸ್ಥಳೀಯ ಮಟ್ಟದಲ್ಲಿ ಕಾಯ್ದಿರಿಸಬೇಕು. ಆ ಬೋರ್‌ವೆಲ್‌ಗಳಿಂದ ಸ್ಥಳೀಯರು ತಮ್ಮ ಸ್ವಂತ ಬಳಕೆಗೆ ನೀರನ್ನು ತಾವೇ ಸರಬರಾಜಿಗೂ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು. ಈ ವ್ಯವಸ್ಥೆಯನ್ನು ಸಂಬಂಧಪಟ್ಟ ವಾರ್ಡ್‌ಗೆ ಉಪಯೋಗಿಸಿಕೊಳ್ಳತಕ್ಕದ್ದು. ಒಂದು ವೇಳೆ ಯಾವುದೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇಲ್ಲವಾಗಿದ್ದರೂ ಕೂಡಾ ಈ ವ್ಯವಸ್ಥೆಯನ್ನು ಕಾಯ್ದಿರಿಸಿಕೊಂಡು ಸ್ಥಳೀಯ ಕಾರ್ಪೊರೇಟರ್ ವಿವೇಚನೆಯ ಮೇರೆಗೆ ಸಮೀಪದ ವಾರ್ಡ್‌ಗೆ ಅದರಿಂದ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರದ ಶಾಲಾ ಕಾಲೇಜುಗಳ ಬಾವಿ, ಬೋರ್‌ವೆಲ್‌ಗಳಿಗೆ ಮನವಿ ಸಲ್ಲಿಸಿ

ನಗರದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ತೆರೆದ ಬಾವಿ ಹಾಗೂ ಬೋರ್‌ವೆಲ್‌ಗಳಿಂದ ನೀರು ಸಂಗ್ರಹಿಸಿ, ಪೂರೈಕೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ಕೋರಿಕೆ ಸಲ್ಲಿಸಿ ಕಾಯ್ದಿರಿಸಿಕೊಳ್ಳುವಂತೆಯೂ ಜಿಲ್ಲಾಧಿಕಾರಿ ಈ ಸಂದರ್ಭ ಮನಪಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಟ್ಯಾಂಕರ್ ನೀರಿಗೆ ಹೆಚ್ಚುವರಿ ಶುಲ್ಕ ಪಡೆದರೆ ನೀರಿನ ಮೂಲ ವಶಪಡಿಸಿ!

ಖಾಸಗಿಯಾಗಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವವರು 6,000 ಲೀಟರ್ ನೀರಿಗೆ 3,200 ರೂ.ಗಳನ್ನು ಪಡೆಯುತ್ತಿರುವುದಾಗಿ ಸಭೆಯಲ್ಲಿ ದೂರು ವ್ಯಕ್ತವಾದಾಗ, ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಪಡೆದಲ್ಲಿ ಅಂತಹ ಖಾಸಗಿ ಟ್ಯಾಂಕರ್‌ಗಳ ನೀರಿನ ಮೂಲವನ್ನು ಸ್ವಾಧೀನ ಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಮೇಯರ್ ಹರಿನಾಥ್, ಉಪ ಮೇಯರ್ ಸುಮಿತ್ರಾ ಕೆ., ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರಾ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. 


ಎಂಎಸ್‌ಇಝೆಡ್‌ನ ಸಂಸ್ಕರಿಸಿದ ನೀರು ಎಂಸಿಎಫ್ ಬಳಕೆಗೆ ಸಲಹೆ

ರಾಜ್ಯದ ಪ್ರಮುಖ ರಸಗೊಬ್ಬರ ಕಾರ್ಖಾನೆಯಾಗಿರುವ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ (ಎಂಸಿಎಫ್) ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಮುಂದಿನ ಒಂದೆರಡು ತಿಂಗಳಲ್ಲಿ ರಸಗೊಬ್ಬರ ಅಗತ್ಯವಾಗಿರುವುದರಿಂದ ಎಂಎಸ್‌ಇಝೆಡ್‌ನಲ್ಲಿ ಸಂಸ್ಕರಿಸಲ್ಪಟ್ಟ ಒಳಚರಂಡಿ ನೀರನ್ನು ಎಂಸಿಎಫ್‌ಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಈ ಸಂದರ್ಭ ಸಲಹೆ ನೀಡಿದರು. 

ಎಂಎಸ್‌ಇಝೆಡ್‌ನಲ್ಲಿ 90 ಎಂಎಲ್‌ಡಿ ಶುದ್ಧ ನೀರು!

ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಂಎಸ್‌ಇಝೆಡ್‌ನಲ್ಲಿ ಸಂಗ್ರಹಿಸಿಟ್ಟಿರುವ ನೀರನ್ನು ಮನಪಾ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಅಲ್ಲಿ 90 ಎಂಎಲ್‌ಡಿ ಶುದ್ಧ ನೀರು ಹಾಗೂ 90 ಎಂಎಲ್‌ಡಿ ಸಂಸ್ಕರಣೆ ಮಾಡಿರುವ ನೀರು ಲಭ್ಯವಿರುವುದು ತಿಳಿದುಬಂದಿದೆ. ಅದನ್ನು ಅಗತ್ಯ ಸಂದರ್ಭದಲ್ಲಿ ಶುದ್ಧ ನೀರನ್ನು ಕುಡಿಯಲು ಸಾರ್ವಜನಿಕರಿಗೆ ಬಲಕೆ ಮಾಡಲು ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News