ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲನಾದ ಯುವಕ ಮತ್ತೆ ಮನೆಗೆ ಬಂದು ನೇಣಿಗೆ ಶರಣಾದ

Update: 2016-05-11 13:32 GMT

ಉಳ್ಳಾಲ, ಮೇ 11: ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಈಜುರಕ್ಷಕರಾದ ಅಶೋಕ್ ಮತ್ತು ಮೋಹನ್ ಸಮಯಪ್ರಜ್ಞೆ ಮೆರೆದು ರಕ್ಷಿಸಿದರೂ, ಹಠ ಬಿಡದ ಯುವಕ ಮನೆಗೆ ಬಂದು ಬಚ್ಚಲುಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ನಡೆದಿದೆ.

ಆತ್ಮಹತ್ಯೆಗೈದ ಯುವಕನನ್ನು ತೊಕ್ಕೊಟ್ಟು ಭಟ್ನನಗರ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಲತೀಶ್ ಗಟ್ಟಿ (30) ಎಂದು ಗುರುತಿಸಲಾಗಿದೆ.

ಪದ್ಮನಾಭ ಗಟ್ಟಿ ಎಂಬವರ ಪುತ್ರನಾಗಿರುವ ಈತ ಕಳೆದ ಹಲವಾರು ವರ್ಷದಿಂದ ಭಟ್ನಗರದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಈತ ಮೂರು ದಿವಸಗಳ ಹಿಂದೆ ಮನೆಯಿಂದ ಕೆಲಸಕ್ಕೆಂದು ಹೋದವ ಮನೆಗೆ ಮತ್ತೆ ಹಿಂದಿರುಗಿರಲಿಲ್ಲ. ಮನೆಯವರು, ಸ್ನೇಹಿತರು ಯುವಕನ ಮೊಬೈಲ್‌ಗೆ ಫೋನ್‌ಗೆ ಕರೆ ಮಾಡಿದರೂ ನಾಟ್ ರೀಚೆಬಲ್ ಬರುತ್ತಿತ್ತು.

ಬುಧವಾರ ಮಧ್ಯಾಹ್ನ ಲತೀಶ್ ಸೋಮೇಶ್ವರದ ಬೀಚಲ್ಲಿ ಸುತ್ತಾಡುತ್ತಿದ್ದಾನೆಂದು ಖಚಿತ ಮಾಹಿತಿ ಪಡೆದ ಈಜುರಕ್ಷಕ ಅಶೋಕ್ ತನ್ನ ಸಹವರ್ತಿ ಮೋಹನ್ ಜೊತೆ ಬೀಚಲ್ಲಿ ಹುಡುಕಾಡಿದಾಗ ಆತ ರುದ್ರಪಾದೆಯ ಮೇಲೆ ಕುಳಿತಿದ್ದು ಬಳಿಕ ಈಜುರಕ್ಷಕರನ್ನು ನೋಡಿ ಅಲ್ಲಿಂದ ಕಣ್ಮರೆಯಾಗಿದ್ದ. ಅಷ್ಟರಲ್ಲಿ ಯುವಕನ ಸಂಬಂಧಿ ಯುವಕನೂ ಬಂದು ತೀವ್ರವಾಗಿ ಶೋಧ ನಡೆಸಿದಾಗ ಸಮುದ್ರ ದಡದ ಪೊದೆಯೊಂದರಲ್ಲಿ ಆತ ಅಡಗಿ ಕುಳಿತಿದ್ದ. ಬಳಿಕ ಈಜುಗಾರರು ಆತನ ಮನವೊಲಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಆದರೆ ಮನೆಗೆ ಬಂದರೂ ಸಮಾಧಾನಗೊಳ್ಳದ ಯುವಕ ತನ್ನ ಆತ್ಮಹತ್ಯೆಯ ಹುಚ್ಚು ಹಠವನ್ನು ಬಿಡದೆ ಬುಧವಾರ ಸಂಜೆ ಮನೆಯ ಬಚ್ಚಲು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾನೆ. ಕೌಟುಂಬಿಕವಾಗಿ ಮನನೊಂದು ಈತ ಆತ್ಮಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News