ಯುಪಿಎಸ್ಸಿ ಫಲಿತಾಂಶ: ಮೂಡುಬಿದಿರೆ ನೀರುಡೆ ನಿವಾಸಿ ಮಿಶಾಲ್ ಕ್ವೀನಿ ಡಿಕೋಸ್ತಾಗೆ 387ನೆ ರ್ಯಾಂಕ್

Update: 2016-05-11 14:01 GMT

ಮುಲ್ಕಿ, ಮೇ 11: 2015ನೆ ಸಾಲಿನ ಯುಪಿಎಸ್ಸಿ ಪರಿಕ್ಷೆಯಲ್ಲಿ ಗ್ರಾಮೀಣ ಪ್ರದೇಶ ಮೂಡುಬಿದಿರೆ ನೀರುಡೆ ನಿವಾಸಿ ಮಿಶಾಲ್ ಕ್ವೀನಿ ಡಿಕೋಸ್ತಾ 387ನೆ ರ್ಯಾಂಕ್ ಪಡೆದಿದ್ದಾರೆ.

ಮೂಡುಬಿದಿರೆಯ ನೀರುಡೆ ಕೊಪ್ಪಲ ನಿವಾಸಿ ಲಾಜರಸ್ ಡಿಕೋಸ್ತಾ ಮತ್ತು ನ್ಯಾನ್ಸಿ ಫಾಲ್ಸಿ ಡಿಕೋಸ್ತಾರ ಮೂವರು ಮಕ್ಕಳಲ್ಲಿ ಎರಡನೆಯವರು ಮಿಶಾಲ್ ಕ್ವೀನಿ ಡಿಕೋಸ್ತಾ.

ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನೀರುಡೆ ಸೈಂಟ್ ಫ್ರಾನ್ಸಿಸ್ ಝೆವಿಯರ್ ಹೈಯರ್ ಫೈಮರಿ ಶಾಲೆಯಲ್ಲಿ ಏಳನೆ ತರಗತಿಯವರೆಗೆ ಕಲಿತರು. ಬಳಿಕ ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಅವರು, ಪ್ರತಿದಿನ 2 ಕಿ.ಮೀ. ದೂರದವರೆಗೆ ನಡೆದು ನಂತರ ಬಸ್‌ನ ಮೂಲಕ ಶಾಲೆಗೆ ತಲುಪುತ್ತಿದ್ದರು.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದ ಮಿಶಾಲ್, 2012ರಲ್ಲಿ ಬೆಂಗಳೂರಿನ ಆರ್‌ಇಸಿಇಇ ಇಂಜಿನಿಯರಿಂಗ್ ವಿದ್ಯಾಲಯದಲ್ಲಿ ಇನ್ಫರ್ಮೇಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದರು.

ಬಿ.ಇ. ಮುಗಿಸಿ ಸುಮಾರು ಒಂದೂವರೆ ವರ್ಷ ಸಿವಿಲ್ ಸರ್ವಿಸ್ ಕೋಚಿಂಗ್ ಪಡೆದುಕೊಳುತ್ತಿರುವಂತೆಯೇ ಕೆಪಿಎಸ್ಸಿ ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ 2015ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು 387 ರ್ಯಾಂಕ್ ಪಡೆದು ಕೊಂಡಿದ್ದಾರೆ.

ಚಿಕ್ಕಂದಿನಿಂದಲೇ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಈಕೆ ಪ್ರೈಮರಿ, ಹೈಸ್ಕೂಲ್ ಮತ್ತು ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದರು. ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದ ಈಕೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಗಳಿಸಿದ್ದರು. ಅಲ್ಲದೆ, ಹಲವು ಬಾರಿ ರಾಜ್ಯಮಟ್ಟದ ಅಥ್ಲೆಟಿಕ್ಸ್‌ಗಳಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಮಿಂಚಿದ್ದರು.

ಲಾಜರಸ್ ಡಿಕೋಸ್ತಾ ದಂಪತಿಯದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿರುವ ಕೃಷಿ ಕುಟುಂಬ. ಮೂವರು ಮಕ್ಕಳಲ್ಲಿ ಹಿರಿಯವಳು ನಿಶಾಲ್ ರಾಣಿ ಡಿಕೋಸ್ತಾ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ಸೋನಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಗ ಕ್ವೀನ್‌ಸನ್ ಹನಿ ಡಿಕೋಸ್ತಾ ಮೆಕಾನಿಕಲ್ ಇಂಜಿನಿಯರಿಂಗ್ ಮಗಿಸಿ ಕೆಲವು ತಿಂಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಹುದ್ದೆ ನಿರ್ವಹಿಸುತ್ತಿದ್ದಾರೆ.

ತನ್ನ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಸುಮಾರು 4 ಎಕ್ರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಕರಿ ಮೆಣಸು ಬೆಳೆಯನ್ನು ಮೂಲ ಕಸುಬಾಗಿ ನಿರ್ವಹಿಸುತ್ತಿರುವ ಲಾಜರಸ್ ಡಿಕೋಸ್ತಾ, ಎಲ್‌ಐಸಿ ಯ ಏಜೆಂಟರಾಗಿದ್ದುಕೊಂಡು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೆ ಯಾವುದೆ ರೀತಿಯ ತೊಂದರೆ ಬರದಂತೆ ನೋಡಿಕೊಂಡು ಅವರವರ ಅಭಿರುಚಿಗೆ ತಕ್ಕಂತೆ ವಿದ್ಯಾಭ್ಯಾಸವನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಿಶಾಲ್ ಕ್ವೀನಿ ಡಿಕೋಸ್ತಾ ಚಿಕ್ಕಂದಿನಿಂದಲೂ ಚುರುಕು ಸ್ವಾಭಾದವಳು. ಸಣ್ಣವಳಿರುವಾಗಲೇ ತನ್ನನೊಂದಿಗೆ ಕೃಷಿಕೆಲಸಗಳಿಗೆ ಸಹಾಯವಾಗುತ್ತಿದ್ದಳು. ಅದೇ ಪ್ರವೃತ್ತಿ ಇಂದಿಗೂ ಮುಂದುವರಿಸಿದ್ದಾಳೆ. ಐಎಎಸ್ ಮಾಡುವುದು ನನ್ನ ಕನಸಾಗಿತ್ತು. ಆದರೆ, ಅಂದಿನ ದಿನಗಲಲ್ಲಿ ನಮಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಧೈರ್ಯತುಂಬುವವರಿಲ್ಲದ ಕಾರಣ ಕನಸಾಗಿಯೇ ಉಳಿದಿತ್ತು. ಇಂದು ನನ್ನ ಮಗಳು ನನ್ನ ಕನಸನ್ನು ಪೂರೈಸುತ್ತಾಳೆ ಎಂಬ ಹೆಮ್ಮೆ ನನಗಿದೆ.
ಲಾಜರಸ್ ಡಿಕೋಸ್ತಾ, ಮಿಶಾಲ್ ಕ್ವೀನಿ ಡಿಕೋಸ್ತಾರ ತಂದೆ.


ತನ್ನ ತಂದೆ ಹೈದರಾಬಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಮನಗಂಡು ಐಎಎಸ್ ಕಲಿತು ಭ್ರಷ್ಟಾಚಾರ ರಹಿತ ಸಮಾಜ ಸೇವೆ ನೀಡುವ ಕನಸು ಕಂಡಿದ್ದರು. ಆದರೆ ಅಂದಿನ ದಿನಗಳಲ್ಲಿ ಆರ್ಥಿಕವಾಗಿ ಕುಗ್ಗಿದ್ದ ಕಾರಣಗಳಿಂದ ತನ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ನೀನಾದರೂ ನನ್ನ ಕನಸು ಪೂರೈಸುವಂತೆ ತಿಳಿಸುತ್ತಿದ್ದರು. ಅದರಂತೆ ತನ್ನ ತಂದೆಯ ಕನಸು ಹಾಗೂ ನನ್ನ ಕನಸಿನಂತೆ ಮೆಟ್ಟಿಲನ್ನು ಮೇಲೇರುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಹೆಬ್ಬಯಕೆ ನನ್ನದು.

ಮಿಶಾಲ್ ಕ್ವೀನಿ ಡಿಕೋಸ್ತಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News