ಆರೋಪಿ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

Update: 2016-05-11 14:58 GMT

ಪುತ್ತೂರು, ಮೇ 11: ಐತ್ತೂರು ಗ್ರಾ.ಪಂ. ಸದಸ್ಯರಾಗಿದ್ದ ಸತೀಶ್ ಪೂಜಾರಿ ಎಂಬವರ ವಿರುದ್ಧದ ಹಣ ದುರುಪಯೋಗ ಆರೋಪ ಸಾಬೀತಾಗಿದ್ದು, ಮಂಗಳೂರು ವಿಶೇಷ ಲೋಕಾಯುಕ್ತ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಆರೋಪಿ ಸತೀಶ್ ಪೂಜಾರಿ ಹೈಕೋರ್ಟ್ ಮೆಟ್ಟಿಲೇರಿದ್ದರೂ ಅಲ್ಲಿ ಅರ್ಜಿ ವಜಾಗೊಂಡಿದೆ. ಲೋಕಾಯುಕ್ತ ನ್ಯಾಯಾಲಯ ಸತೀಶ್ ಪೂಜಾರಿ ನಡೆಸಿರುವ ಹಣ ದುರುಪಯೋಗ ಪ್ರಕರಣವನ್ನು ಗಂಭೀರ ಎಂದು ಪರಿಗಣಿಸಿ ಮಂಗಳೂರು ಲೋಕಾಯುಕ್ತ ಎಸ್ಪಿಯವರಿಗೆ ತನಿಖೆ ನಡೆಸುವಂತೆ ಆದೇಶ ನೀಡಿದೆ. ಆದರೆ ನ್ಯಾಯಾಲಯದ ಆದೇಶ ಇನ್ನೂ ಪಾಲನೆಯಾಗಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇದ್ದರೆ ಜಿಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಐತ್ತೂರಿನ ಸಾಮಾಜಿಕ ಕಾರ್ಯಕರ್ತ ಕೆ.ಪಿ.ಮೋಹನ್ ಎಚ್ಚರಿಸಿದ್ದಾರೆ.

ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2011-12ನೆ ಸಾಲಿನ ಎಸ್ಸಿ,ಎಸ್ಟಿ ಪಂಗಡಕ್ಕೆ ಮೀಸಲಿರಿಸಿದ್ದ 50,730 ರೂ. ಅನುದಾನವನ್ನು ಪಂಚಾಯತ್ ಸದಸ್ಯ ಸತೀಶ್ ಪೂಜಾರಿ ದುರುಪಯೋಗ ಮಾಡಿರುವುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿದೆ. ಸತೀಶ್ ಪೂಜಾರಿ ಅವರಿಂದ ದುರುಪಯೋಗವಾದ ಹಣವನ್ನು ವಸೂಲಿ ಮಾಡಿ ನಿಯಮಾನುಸಾರ ಕ್ರಮ ಕೈಗೊಂಡು, ಸದಸ್ಯತ್ವ ರದ್ದುಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು 4 ತಿಂಗಳು ಕ್ರಮ ಕೈಗೊಂಡಿರಲಿಲ್ಲ. ಜಿಪಂ ಅಧಿಕಾರಿಗಳ ಸಹಕಾರದ ಮೇಲೆ ಸತೀಶ್ ಪೂಜಾರಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ರಿಟ್ ಅರ್ಜಿಯ ವಿಚಾರ ಕಪೋಲಕಲ್ಪಿತ ಎಂದು ಪರಿಗಣಿಸಿದ ಉಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.

ನ್ಯಾಯಾಲಯ ಅಪರಾಧಿ ಎಂದು ತೀರ್ಮಾನಿಸಿರುವ ಸತೀಶ್ ಪೂಜಾರಿ ವಿರುದ್ಧ ಉಚ್ಚ ನ್ಯಾಯಾಲಯದ ಆದೇಶವಾಗಿ 18 ದಿನ ಕಳೆದಿದೆ. ಆದರೂ ಮಂಗಳೂರು ವಿಶೇಷ ಲೋಕಾಯುಕ್ತ ಕೋರ್ಟ್‌ನ ಆದೇಶವನ್ನು ಪಾಲಿಸಲು ಇಲಾಖಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. 15 ದಿನಗಳೊಳಗೆ ಸತೀಶ್ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡುವುದು ಅನಿವಾರ್ಯ. ವಿಳಂಬ ನೀತಿ ಅನುಸರಿಸಿದರೆ ಜಿ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಪಿ.ರಾಮಣ್ಣ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News