ಎಂಆರ್‌ಪಿಎಲ್ ನಾಲ್ಕನೆ ಹಂತದ ವಿಸ್ತರಣೆ

Update: 2016-05-11 18:34 GMT

ಉಡುಪಿ, ಮೇ 11: ಪರಿಸರ ಮಾಲಿನ್ಯ ಸೇರಿದಂತೆ ಹಲವು ವಿವಾದಗಳಲ್ಲಿ ಸಿಲುಕಿರುವ ಸುರತ್ಕಲ್ ಸಮೀ ಪದ ಎಂಆರ್‌ಪಿಎಲ್‌ನ 4ನೆ ಹಂತದ ವಿಸ್ತರಣೆಗಾಗಿ ಸುಮಾರು 1,050 ಎಕರೆ ಭೂಮಿಯ ಸ್ವಾಧೀನಕ್ಕೆ ಒಪ್ಪಿಗೆ ನೀಡಿರುವ ರಾಜ್ಯ ಸರಕಾರದ ನಿರ್ಧಾರಕ್ಕೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶ್ರೀಕೃಷ್ಣ ಮಠದ ಬಡಗುಮಳಿಯಲ್ಲಿ ಇಂದು ಮಂಗಳೂರು ಎಂಎಸ್‌ಇಝೆಡ್ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಸ್ವಾಮೀಜಿ ಈ ವಿಷಯ ತಿಳಿಸಿದರು. ಮಂಗಳೂರು ತಾಲೂಕಿನ ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು, ತೆಂಕ ಎಕ್ಕಾರು ಗ್ರಾಮಗಳಲ್ಲಿ 1,050 ಎಕರೆ ಭೂಮಿಯನ್ನು ಅತೀ ಶೀಘ್ರದಲ್ಲಿ ಸ್ವಾಧೀನ ಪಡಿಸಿಕೊಂಡು ಉಚಿತವಾಗಿ ನೀಡುವಂತೆ ಎಂಆರ್‌ಪಿಎಲ್ ಸರಕಾರಕ್ಕೆ ಮನವಿ ಮಾಡಿದ್ದು, ರಾಜ್ಯ ಸರಕಾರ ಇದಕ್ಕೆ ಸಮ್ಮತಿಸಿದೆ ಎಂದವರು ಹೇಳಿದರು.
2008ರಲ್ಲಿ ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು, ತೆಂಕ, ಎಕ್ಕಾರು ಗ್ರಾಮಗಳ ಸುಮಾರು 2,035 ಎಕರೆ ಪ್ರದೇಶವನ್ನು ಎಂಆರ್‌ಪಿಎಲ್ ಪಾಲುದಾರಿಕೆಯ ಮಂಗಳೂರು ಎಸ್‌ಇಝೆಡ್‌ನ 2ನೆ ಹಂತಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿತ್ತು. ಆಗ ತಾನು, ಸ್ಥಳೀಯ ಕುಡುಬಿ ಜನಾಂಗ, ರೈತರು ಹಾಗೂ ಹೋರಾಟ ಸಮಿತಿಯೊಂದಿಗೆ ಸೇರಿ ಪ್ರತಿಭಟ ನೆಗೆ ಮುಂದಾದಾಗ ಮಣಿದ ಆಗಿನ ಬಿಜೆಪಿ ಸರಕಾರ 2011ರಲ್ಲಿ ಭೂಸ್ವಾಧೀನವನ್ನು ಕೈಬಿಟ್ಟಿತ್ತು ಎಂದವರು ಹೇಳಿದರು. ವಿಶೇಷವೆಂದರೆ 2008ರಲ್ಲಿ ತನ್ನ 3ನೆ ಹಂತದ ವಿಸ್ತರಣೆಗಾಗಿ ಕೇವಲ 251 ಎಕರೆ ಭೂಮಿಯನ್ನು ಮಾತ್ರ ಪಡೆದಿದ್ದ ಎಂಆರ್‌ಪಿಎಲ್, ಇದೀಗ ಅದೇ ಗಾತ್ರದ 4ನೆ ಹಂತದ ವಿಸ್ತರಣೆಗಾಗಿ 1,050 ಎಕರೆ ಭೂಮಿಯನ್ನು ಕೇಳುತ್ತಿದೆ ಎಂದು ಹೋರಾಟ ಸಮಿ ತಿಯ ಸದಸ್ಯರು ವಿವರಿಸಿದರು. ಎಂಆರ್‌ಪಿಎಲ್ ಒಟ್ಟಾರೆಯಾಗಿ 3,000 ಎಕರೆಗೂ ಅಧಿಕ ಭೂಮಿಯ ಸ್ವಾಧೀನಕ್ಕೆ ಮುಂದಾಗಿದ್ದು, ಇದೀಗ ಮೊದಲ ಹಂತದಲ್ಲಿ ತಕ್ಷಣವೇ 1,050 ಎಕರೆ ಭೂಸ್ವಾಧೀನಕ್ಕೆ ಕೆಐಡಿಬಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ಸಚಿವ ಆರ್.ವಿ.ದೇಶಪಾಂಡೆ ಪ್ರಸ್ತಾಪಕ್ಕೆ ತನ್ನ ಒಪ್ಪಿಗೆ ಸೂಚಿಸಿದ್ದಾರೆ ಎಂದವರು ಹೇಳಿದರು.

ಗ್ರಾಪಂ ವಿರೋಧ: ಈಗ ಭೂಸ್ವಾಧೀನಕ್ಕೆ ಮುಂ ದಾಗಿರುವ ಪ್ರದೇಶ ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ. ಆದರೆ ಕಳೆದ ಮಾರ್ಚ್‌ನಲ್ಲಿ ನಡೆದ ಪೆರ್ಮುದೆ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗಿದ್ದು, ಇದಕ್ಕೆ ಆಕ್ಷೇಪ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ, ಮೇ 5ರಂದು ಕುತ್ತೆತ್ತೂರಿನ ಮಂಗಳಪೇಟೆ ಯಲ್ಲಿ ಪೆರ್ಮುದೆ, ಕುತ್ತೆತ್ತೂರು ಗ್ರಾಮಗಳ ನಿವಾಸಿಗಳ ಭಾಗವಹಿಸುವಿಕೆಯಲ್ಲಿ ನಡೆದ ಪೆರ್ಮುದೆ ಪಂಚಾಯತ್ ವ್ಯಾಪ್ತಿಯ ಗ್ರಾಮಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಒಕ್ಕೊರಲ ವಿರೋಧ ವ್ಯಕ್ತವಾಗಿದೆ. 2013ರ ಕೇಂದ್ರ ಭೂಸ್ವಾಧೀನ, ಪುನರ್ವಸತಿ ನಿಯಮಗಳ ಅನುಸಾರವೇ ಈ ಸ್ವಾಧೀನ ಪ್ರಕ್ರಿಯೆ ನಡೆಯಬೇಕು. ಆಗ ಆ ಪ್ರದೇಶದ ಬಹುಪಾಲು ರೈತರ ವಿರೋಧವಿದ್ದರೆ ಮಾಡುವಂತಿಲ್ಲ ಎಂದು ಹೋರಾಟಗಾರರು ನುಡಿದರು.
ಎಸ್‌ಇಝೆಡ್‌ನ ಪ್ರಥಮ ಹಂತಕ್ಕೆ ಜನರಿಂದ ಕಸಿದು ರಾಜ್ಯ ಸರಕಾರ ಕೊಡ ಮಾಡಿರುವುದು 2,127 ಎಕರೆ. ಇದರಲ್ಲಿ ಒಎನ್‌ಜಿಸಿ, ಎಂಆರ್‌ಪಿಎಲ್‌ನ ಒಎಂಪಿಎಲ್ ಘಟಕ ಸೇರಿ ವಿವಿಧ ಘಟಕಗಳ ಸ್ಥಾಪನೆಗೆ ಬಳಕೆಯಾಗಿರುವುದು ಕೇವಲ 817 ಎಕರೆ ಪ್ರದೇಶ ಮಾತ್ರ. ಇದರಲ್ಲಿ ಉಳಿದ 1,300 ಎಕರೆ ಪ್ರದೇಶವನ್ನೇ ಸರಕಾರ ಸೂಕ್ತ ಕಾನೂನು ತಿದ್ದುಪಡಿ ಮೂಲಕ ಎಂಆರ್‌ಪಿಎಲ್‌ಗೆ ನೀಡಬಹುದು ಎಂದು ಪೇಜಾವರಶ್ರೀ ನುಡಿದರು.
ಯಾವುದೇ ಕಾರಣಕ್ಕೂ ಸರಕಾರ ಭೂಸ್ವಾಧೀನಕ್ಕೆ ಮುಂದಾಗಬಾರದು. ಹೊಸದಾಗಿ ಭೂಸ್ವಾಧೀನಕ್ಕೆ ಆ ಪ್ರದೇಶದ ಶಾಸಕರು ಹಾಗೂ ಸಂಸದರು ಅವಕಾಶ ನೀಡಬಾರದು ಎಂದ ಪೇಜಾವರಶ್ರೀ, ರೈತರ ಒಪ್ಪಿಗೆ ಇಲ್ಲದೇ ಭೂಸ್ವಾಧೀನಕ್ಕೆ ಮುಂದಾದರೆ ಮತ್ತೆ ಹೋರಾಟಕ್ಕೆ ಸ್ಥಳೀಯರು ಸನ್ನದ್ಧರಾಗಿದ್ದಾರೆ ಎಂದರು.
ದಿನಕ್ಕೆ 6.06 ಕೋಟಿ ಲೀಟರ್ ನೀರು
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಮುಖ್ಯವಾಗಿ ಮಂಗಳೂರು ಮಹಾನಗರ ಪಾಲಿಕೆ ಪ್ರದೇಶ ವ್ಯಾಪ್ತಿ ಯಲ್ಲಿ ಕುಡಿಯುವ ನೀರಿಗಾಗಿ ಜನಸಾಮಾನ್ಯರು ನಡೆಸು ತ್ತಿರುವ ಹೋರಾಟ ಎಲ್ಲರಿಗೂ ತಿಳಿದಿರುವಂತಹದ್ದೆ. ಇದಕ್ಕೆ ಮಂಗಳೂರು ಆಸುಪಾಸಿನಲ್ಲಿ ತಲೆ ಎತ್ತಿರುವ ಎಂಆರ್‌ಪಿಎಲ್‌ನಂತಹ ಬೃಹತ್ ಕೈಗಾರಿಕೆಗಳ ಪಾಲೂ ಸಣ್ಣದೇನಲ್ಲ.
ಈಗ ಎಂಆರ್‌ಪಿಎಲ್‌ನ ನಾಲ್ಕನೆ ಹಂತದ ವಿಸ್ತರಣೆಗೆ ಜಿಲ್ಲೆಯ ಜೀವನದಿ ನೇತ್ರಾವತಿಯಿಂದ ಪ್ರತಿದಿನ 6.06 ಕೋಟಿ ಲೀಟರ್ ನೀರನ್ನು ಬಳಸುವ ಕಂಪೆನಿಯ ಪ್ರಸ್ತಾವನೆಗೆ ರಾಜ್ಯ ಸರಕಾರ ಸಮ್ಮತಿ ನೀಡಿದೆ. ಅಲ್ಲದೇ, ವಿವಿಧ ಘಟಕಗಳಿಗೆ ನಿರಂತರ ನೀರು ಸರಬರಾಜನ್ನು ಖಾತ್ರಿಪಡಿಸಲು ರಾಜ್ಯ ಸರಕಾರದ ಖರ್ಚಿ ನಲ್ಲಿ ಜಲಾಶಯಗಳ ನಿರ್ಮಾಣ ಮಾಡಬೇಕೆಂಬ ಎಂಆರ್‌ಪಿಎಲ್‌ನ ಬೇಡಿಕೆಯನ್ನು ಒಪ್ಪಿಕೊಂಡಿದೆ ಎಂದು ಹೋರಾಟ ಸಮಿತಿಯ ಸದಸ್ಯರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News