ನೇತ್ರಾವತಿ ಉಳಿವಿಗೆ ಆಗ್ರಹಿಸಿ ಧರಣಿ

Update: 2016-05-11 18:41 GMT

ಪುತ್ತೂರು, ಮೇ 11: ನೇತ್ರಾವತಿ ನದಿ ತಿರುವು ಯೋಜನೆ ಮಂಗಳೂರು ವಲಯವನ್ನು ತೈಲ, ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸುವ ಸಂಚಿನ ಭಾಗವಾಗಿದ್ದು, ಈ ಯೋಜನೆಯಿಂದಾಗಿ ಮುಂದೆ ಸಂಭವಿಸಬಹುದಾದ ಗಂಭೀರತೆಯನ್ನು ಅರ್ಥಮಾಡಿಕೊಂಡು ಜಾತಿ ಮತ,ಪಕ್ಷ ಭೇದ ಮರೆತು ಹೋರಾಟಕ್ಕೆ ಸಿದ್ಧರಾಗದಿದ್ದಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಭಾಗದ ಜನತೆ ಗಂಟು ಮೂಟೆ ಕಟ್ಟಿಕೊಂಡು ಜಿಲ್ಲೆಯಿಂದ ಹೊರ ಹೋಗುವ ಪರಿಸ್ಥಿತಿ ಬರಬಹುದು ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮಾರ್ಗದರ್ಶಕ ಎಂ.ಜಿ,ಹೆಗ್ಡೆ ಹೇಳಿದರು.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಪುತ್ತೂರು ಘಟಕದ ಆಶ್ರಯದಲ್ಲಿ ಜೀವನದಿ ನೇತ್ರಾವತಿಯ ಉಳಿವಿಗಾಗಿ ಆಗ್ರಹಿಸಿ ಮತ್ತು ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಬುಧವಾರ ಪುತ್ತೂರಿನ ಮಿನಿ ವಿಧಾನ ಸೌಧದ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ, ಧರ್ಮದ ವಿಚಾರದಲ್ಲಿ ಕಚ್ಚಾಡುವ, ಧರ್ಮದ ವಿಚಾರದಲ್ಲಿ ಕಲ್ಲು ಬಿದ್ದಾಗ ಒಟ್ಟಾಗಿ ಸೇರಿ ಪ್ರತಿಭಟಿಸುವ ನಾವು ನೇತ್ರಾವತಿ ಮೂಲ ನದಿಗೆ ಕಲ್ಲು ಬಿದ್ದಾಗ ಒಟ್ಟು ಸೇರುವುದಿಲ್ಲ. ಪ್ರಕೃತಿಗೆ ವಿಕೃತಿ ಮಾಡುತ್ತಿದ್ದರೂ ನಾವು ಸುಮ್ಮನಿರುವುದು ವಿಷಾದನೀಯ ಎಂದರು.
ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಎಂ.ಕೆ.ಶ್ರೀಷ ಕುಮಾರ್, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮಾರ್ಗದರ್ಶಕ ಜಿತೇಂದ್ರ ಕೊಟ್ಟಾರಿ, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಸಂಚಾಲಕ ಸತ್ಯಜಿತ್ ಸುರತ್ಕಲ್, ಸಮಿತಿಯ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ನೋಟರಿ ವಕೀಲ ನೂರುದ್ದೀನ್ ಸಾಲ್ಮರ ಮಾತನಾಡಿದರು.

ಸಮಿತಿಯ ಪುತ್ತೂರು ಘಟಕದ ಅಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ಉಪಾಧ್ಯಕ್ಷ ಯುನಿಟಿ ಹಸನ್ ಹಾಜಿ, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್ ಪುತ್ತಿಲ, ಅಜಿತ್‌ಕುಮಾರ್ ರೈ ಹೊಸಮನೆ, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಭಂಡಾರಿ, ತಾಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ಪ್ರವೀಣ್ ರೈ ತಿಂಗಳಾಡಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಬಾಬು ಗೌಡ, ವಕೀಲ ಚಿನ್ಮಯ ರೈ, ಈಶ್ವರಮಂಗಲ ವರ್ತಕ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ಆಳ್ವ ಮೇನಾಲ, ಅಶ್ರಫ್ ಬಾವು, ಇಕ್ಬಾಲ್, ಹಮೀದ್ ಸಾಲ್ಮರ, ಅಬ್ದುಸ್ಸಮದ್, ನವೀನ್ ಪಕ್ಕಳ ಬೆಳ್ಳಿಪ್ಪಾಡಿ, ಜಯಪ್ರಕಾಶ್ ರೈ ನೂಜಿಬೈಲು ಮತ್ತಿತರರು ಪಾಲ್ಗೊಂಡಿದ್ದರು. ವಕೀಲ ಶ್ಯಾಮ ಪ್ರಸಾದ್ ಕೈಲಾರ್ ಮನವಿ ವಾಚಿಸಿದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News