ಚೈಲ್ಡ್‌ಲೈನ್‌ನಿಂದ ಮನೆಕೆಲಸಕ್ಕಿದ್ದ ಬಾಲಕಿಯ ರಕ್ಷಣೆ

Update: 2016-05-12 14:11 GMT

ಮಂಗಳೂರು, ಮೇ 12: ನಗರದ ತೊಕ್ಕೊಟ್ಟು ಬಬ್ಬುಕಟ್ಟೆ ಬಳಿಯ ಮನೆವೊಂದರಲ್ಲಿ ಕೆಲಸಕ್ಕಿದ್ದ ಬಾಲಕಿಯೋರ್ವಳನ್ನು ಬಾಲಕಿಯನ್ನು ಮಂಗಳೂರು-1098, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಬಾಲಕಿಯು ಮೂಲತಃ ಮಡಿಕೇರಿ ಮೂಲದವಳಾಗಿದ್ದು, ಬಡ ಕುಟುಂಬದವರಾಗಿದ್ದಾರೆ. ಈ ಬಾಲಕಿಯ ಹೆತ್ತವರು ಮಡಿಕೇರಿ ರಾಜಪೇಟೆಯ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮನೆಕೆಲಸಕ್ಕಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚೈಲ್ಡ್‌ಲೈನ್ ಮಂಗಳೂರು-1098 ಕಾರ್ಯಾಚರಣೆ ನಡೆಸಿ ಸುಮಾರು 12 ವರ್ಷ ಪ್ರಾಯದ ಬಾಲಕಿಯನ್ನು ರಕ್ಷಿಸಿದ್ದಾರೆ.

ಆದರೆ, ತೋಟದ ಮಾಲಕರ ಪುತ್ರ ಮಂಗಳೂರು ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅವರು ಬಬ್ಬುಕಟ್ಟೆಯಲ್ಲಿ ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇವರ ಮನೆ ಕೆಲಸಕ್ಕೆ ಮಡಿಕೇರಿಯಿಂದ ಈ ಬಾಲಕಿಯನ್ನು ಕರೆತರಲಾಗಿದೆ ಎಂದು ಹೇಳಲಾಗಿದೆ.

ಬಾಲಕಿಗೆ ಶಿಕ್ಷಣವನ್ನು ಮುಂದುವರಿಸುವ ಆಸಕ್ತಿ ಇದ್ದರೂ ಕುಟುಂಬದಲ್ಲಿ ಬಡತನ ಇರುವ ಕಾರಣ ಶಾಲೆಯನ್ನು ಅರ್ಧದಲ್ಲಿ ಬಿಟ್ಟು, ಮನೆಕೆಲಸಕ್ಕೆ ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಸೂಕ್ತ ವ್ಯವಸ್ಥೆ ಇಲ್ಲದೆ ಬಾಲಕಿ ಶಿಕ್ಷಣ ವಂಚಿತರಾಗಿದ್ದಾಳೆ.

ಇದೀಗ ಈ ಬಾಲಕಿ ಶಾಲೆಯಿಂದ ಹೊರಗುಳಿದ ಮಗು ಎಂದು ಗುರುತಿಸಲಾಗಿದ್ದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ವತಿಯಿಂದ ನಡೆಯುತ್ತಿರುವ ‘ಶಾಲೆ ಕಡೆ, ನಮ್ಮ ನಡೆ’ ಎಂಬ ಆಂದೋಲನದ ಅಡಿಯಲ್ಲಿ ಮರಳಿ ಶಾಲೆಗೆ ದಾಖಲಿಸಲಾಗುವುದು ಹಾಗೂ ಈ ಮಾಹಿತಿಯನ್ನು ಶಿಕ್ಷಣ ಇಲಾಖೆ ಗಮನಕ್ಕೆ ತರಲಾಗುವುದು. ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಬಾಲಕಿಯ ರಕ್ಷಣಾ ತಂಡದಲ್ಲಿ ಕಾರ್ಮಿಕ ಇಲಾಖಾಧಿಕಾರಿಗಳಾದ ಗಣಪತಿ ಹೆಗಡೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ಯೋಜನಾ ನಿರ್ದೇಶಕ ಶ್ರೀನಿವಾಸ್, ಚೈಲ್ಡ್‌ಲೈನ್ ಮಂಗಳೂರು-1098ನ ಕೇಂದ್ರ ಸಂಯೋಜಕ ಶ್ರೀ ಸಂಪತ್ ಕಟ್ಟಿ ಮಾರ್ಗದರ್ಶನದಲ್ಲಿ ಚೈಲ್ಡ್‌ಲೈನ್ ಮಂಗಳೂರು-1098ನ, ರೇವತಿ ಹೊಸಬೆಟ್ಟು, ಜಯಂತಿ ಕೋಕಳ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಭವ್ಯಾ ಕುಮಾರ್ ಎಸ್., ಯಶೋಧಾ ಪುಂಜಾಲಕಟ್ಟೆ, ವಾಹನ ಚಾಲಕರಾದ ಅಮರ್ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಪ್ರಮೀಳಾ ಎಚ್. ಭಾಗವಹಿಸಿದ್ದರು ಚೈಲ್ಡ್‌ಲೈನ್‌ನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News