ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Update: 2016-05-12 18:16 GMT


ಪಡುಬಿದ್ರೆ, ಮೇ 12: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉತ್ತಮ ಸೇವೆಯ ಭರವಸೆ ನೀಡುವ ಪೇ ಟ್ಯಾಕ್ಸಿಗಳು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವಲ್ಲಿ ವಿಲವಾಗಿದೆ ಎಂದು ಪ್ರಯಾಣಿಕರೊಬ್ಬರು ಪತ್ರಿಕೆಯೊಂದಿಗೆ ದೂರಿಕೊಂಡಿದ್ದಾರೆ. ಕಾಪು ಸಮೀಪದ ಮೂಳೂರಿನ ನಿವಾಸಿ ಬಾರೂದ್ ಇಸ್ಮಾಯೀಲ್ ಎಂಬವರು ಮಂಗಳವಾರ ಬೆಳಗ್ಗಿನ ಜಾವ ದುಬೈಯಿಂದ ಜೆಟ್ ಏರ್‌ವೇಸ್ ವಿಮಾನದಿಂದ ಹೊರಟು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 7:40ಕ್ಕೆ ಆಗಮಿಸಿದ್ದರು. ಮನೆಯಲ್ಲಿ ಶುಭ ಕಾರ್ಯಕ್ರಮಕ್ಕಾಗಿ ತುರ್ತಾಗಿ ಆಗಮಿಸಿದ ಅವರು 8:25ರ ಸುಮಾರಿಗೆ ನಿಲ್ದಾಣ ದಿಂದ ಹೊರಬಂದು ಪೇ ಟ್ಯಾಕ್ಸಿಯನ್ನು ಗೊತ್ತು ಪಡಿಸಿದ್ದರು. ಡಿಲಕ್ಸ್ ಪೇ ಟ್ಯಾಕ್ಸಿಗಾಗಿ 1,200 ರೂ.ನೀಡಿ ರಶೀದಿಯನ್ನು ಪಡೆದಿದ್ದರು.
ನಿಲ್ದಾಣದಲ್ಲಿದ್ದ ಡಿಲಕ್ಸ್ ಟ್ಯಾಕ್ಸಿಗಾಗಿ ಹಣ ನೀಡಿದ್ದರೂ, ಇಂಡಿಕಾ ಕಾರೊಂದು ಆಗಮಿಸಿ ಇದೇ ಡಿಲಕ್ಸ್ ಕಾರೆಂದು ಅವರನ್ನು ಕುಳ್ಳಿರಿಸಿ ಮೂಳೂರಿನತ್ತ ಪ್ರಯಾಣ ಬೆಳೆಸಿದೆ. ಆ ಕಾರು ಅತ್ಯಂತ ಕಳಪೆಯಾಗಿದೆ. ನಿಧಾನಗತಿಯಲ್ಲಿ ಬಂದ ಟ್ಯಾಕ್ಸಿ ಪಡುಬಿದ್ರೆಗೆ ಆಗಮಿಸುತ್ತಲೇ ಕೆಟ್ಟು ನಿಂತಿತು. ತುರ್ತಾಗಿ ಮನೆಗೆ ಆಗಮಿಸಬೇಕಿದ್ದ ಇಸ್ಮಾಯೀಲ್ ಪಡುಬಿದ್ರೆಯಿಂದ ಟ್ಯಾಕ್ಸಿ ತರಿಸಿ ಮೂಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅವರು ಮತ್ತೊಂದು ಕಾರಿನಲ್ಲಿ ಹೊರಟಾಗಲೂ ಮೂಲ ಟ್ಯಾಕ್ಸಿಯವರು ಪ್ರಯಾಣಿಕರಿಗೆ ಯಾವುದೇ ಸ್ಪಂದನೆ ನೀಡದೆ ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸಿದ್ದು ಖಂಡನೀಯ ಎಂದು ಇಸ್ಮಾಯೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಇಸ್ಮಾಯೀಲ್, ನಾವು ಉತ್ತಮ ಸೇವೆ ನೀಡುತ್ತಾರೆಂದು ಭಾವಿಸಿ ಪೇ ಟ್ಯಾಕ್ಸಿಯನ್ನು ನಿಗದಿಪಡಿಸಿದ್ದೇನೆ. ಆದರೆ ಅವರ ಸೇವೆಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಬೇರೆ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರು ತಮ್ಮ ಟ್ಯಾಕ್ಸಿ ಸೇವೆಯ ಬಗ್ಗೆ ಯಾವ ಭಾವನೆ ಬೆಳೆಸಬಹುದು ಎಂದು ಬೇಸರ ವ್ಯಕ್ತ ಪಡಿಸಿದರು. ಈ ಪ್ರಕರಣದ ಕುರಿತು ವಿಮಾನ ನಿಲ್ದಾಣದ ಉನ್ನತಾಕಾರಿಯವರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಗಮನಕ್ಕೆ ಬಂದಿಲ್ಲ: ವಾಲ್ಟರ್
ದುಬೈನಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಮೋಸಕ್ಕೊಳಗಾಗಿದ್ದಾರೆ ಎಂದು ಹೇಳಲಾದ ವ್ಯಕ್ತಿಯಿಂದ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಏರ್‌ಪೋರ್ಟ್ ಟೂರಿಸ್ಟ್ ಆ್ಯಂಡ್ ಟ್ಯಾಕ್ಸಿ ಅಸೋಸಿಯೇಶನ್‌ನ ಉಪಾಧ್ಯಕ್ಷ ವಾಲ್ಟರ್ ಡಿಕುನ್ಹಾ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಯಾಣಿಕ ಮೋಸಕ್ಕೊಳಗಾದರೆ ಆ ವ್ಯಕ್ತಿಗೆ ನೀಡಲಾದ ಪೇ ಸ್ಲಿಪ್‌ನಲ್ಲಿ ಮೊಬೈಲ್ ಸಂಖ್ಯೆಗಳು ಇವೆ. ಅದನ್ನು ಸಂಪರ್ಕಿಸಿ ಸಂಬಂಧಪಟ್ಟವರನ್ನು ದೂರು ನೀಡಬಹುದು. ಇಂತಹ ವಿಚಾರಗಳು ನಮ್ಮ ಗಮ ನಕ್ಕೆ ಬಂದರೆ ಕೂಡಲೇ ಪರಿಶೀಲಿಸಿ ಸಂಬಂಧಪಟ್ಟ ಚಾಲಕನ ವಾಹನ ಸೇವೆಯನ್ನು ರದ್ದುಗೊಳಿಸುತ್ತೇವೆ. ಪ್ರಯಾಣಿಕರನ್ನು ಕೊಂಡೊಯ್ಯುವ ಕಾರು ಸುಸ್ಥಿತಿ ಯಲ್ಲಿರಬೇಕು. ಎಸಿ ಹಾಳಾಗಿದ್ದರೆ ಚಾಲಕ ಮೊದಲೇ ಪ್ರಯಾಣಿಕರಿಗೆ ತಿಳಿಸಬೇಕು. ಯಾವ ಪ್ರಯಾಣಿಕನಿಗೂ ಮೋಸ ಮಾಡಬಾರದು ಎಂದರು.
ದೂರು ಬಂದರೆ ಕ್ರಮ: ರಾಧಾಕೃಷ್ಣ
ಪ್ರಯಾಣಿಕನಿಗೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರ್‌ಪೋರ್ಟ್‌ನ ನಿರ್ದೇಶಕ ಜೆ.ಟಿ.ರಾಧಾಕೃಷ್ಣ, ಈ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪೇ ಟ್ಯಾಕ್ಸ್ ಚಾಲಕರಿಂದ ಪ್ರಯಾಣಿಕರಿಗೆ ಅನ್ಯಾಯವಾಗಿದ್ದರೆ ಅವರು ದೂರು ನೀಡಲಿ. ಆ ದೂರಿನ ಆಧಾರದ ಮೇಲೆ ಸಂಬಂಧ ಪಟ್ಟ ಚಾಲ ಕನ ವಾಹನವನ್ನು ಅಮಾನತಿನಲ್ಲಿಟ್ಟು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News