ಕೊಕ್ಕಡ ಚರ್ಚ್ ಧರ್ಮಗುರುಗಳ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

Update: 2016-05-12 18:23 GMT

ಉಪ್ಪಿನಂಗಡಿ, ಮೇ 12: ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟರ ಕ್ರೈಸ್ತ ದೇವಾಲಯದ ಧರ್ಮಗುರುಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಭಕ್ತ ವೃಂದದಿಂದ ದೇವಾಲಯದ ಒಳಿತಿಗಾಗಿ ಪಡೆದ ಹಣಕ್ಕೆ ರಶೀದಿ ನೀಡದೆ ಹಣ ದುರ್ಬಳಕೆ ಮಾಡಿದ್ದಾರೆ. ಅಲ್ಲದೆ ಚರ್ಚ್‌ಗೆ ಸಂಬಂಧಪಟ್ಟ ಜಾಗವನ್ನು ಭಕ್ತವೃಂದದ ವಿರೋಧದ ನಡುವೆಯೂ ಕಬಳಿಸಲು ಹುನ್ನಾರ ನಡೆಸಿದ್ದಾರೆ. ಆದ್ದರಿಂದ ನ್ಯಾಯಕ್ಕಾಗಿ ಚರ್ಚ್‌ಗೆ ಬೀಗ ಜಡಿದು ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಮೋಳಿ ಸ್ಟೈಲಾ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಕ್ಕೆ ಒಂದು ಬಾರಿಯಾದರೂ ಚರ್ಚ್‌ನ ಮಹಾಸಭೆ ಕರೆಯಬೇಕೆಂದು ಬೈಲಾದಲ್ಲಿದೆ. ಆದರೆ ಈಗಿನ ಧರ್ಮಗುರುಗಳು ಇಲ್ಲಿಗೆ ಬಂದು ಆರು ವರ್ಷವಾದರೂ ಎರಡು ಮಹಾಸಭೆಗಳನ್ನಷ್ಟೇ ಕರೆದಿದ್ದಾರೆ. ಚರ್ಚ್‌ನ ಅಧೀನಕ್ಕೊಳಪಟ್ಟು ಒಂದರಿಂದ ಏಳರ ತನಕ ಕನ್ನಡ ಮಾಧ್ಯಮ ಹಾಗೂ 8ರಿಂದ 10ರವರೆಗೆ ಆಂಗ್ಲ ಮಾಧ್ಯಮ ಮತ್ತು ಎಲ್‌ಕೆಜಿ, ಯುಕೆಜಿ ಶಾಲೆಗಳಿವೆ. ಆದರೆ ಇಲ್ಲಿ ಶಾಲಾಡಳಿತ ಮಂಡಳಿಯ ನೇಮಕ ಮಾಡದ ಧರ್ಮಗುರುಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದರು.
 ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ಲಾರೆನ್ಸ್ ಮಾಡ್ತಾ, ಇ.ಪಿ. ಚಾಕೊ, ಮಾರೀಸ್ ಮೊಂತೇರೊ, ಮಾರ್ನೆಲ್ ಗೋನ್ಸಾಲ್ವಿನ್, ಚರ್ಚ್ ಸದಸ್ಯರಾದ ಜಾನ್ಸನ್ ಗಲ್ಭಾವೊ, ಮಾಕ್ಸಿಂ ಪಿಂಟೊ, ಜ್ಯೋತಿ ಗೋನ್ಸಾಲ್ವಿನ್, ಮಾರ್ಕೋ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News