ನೇತ್ರಾವತಿಗಾಗಿ ಒಂದಿಷ್ಟು ಸಮಯ ಕೊಡಿ!

Update: 2016-05-13 09:35 GMT

*16ರಂದು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ

ಮಂಗಳೂರು, ಮೇ 13: ಕರಾವಳಿಯ ಜೀವನದಿ ನೇತ್ರಾವತಿಯ ಸಂರಕ್ಷಣೆಗಾಗಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ 16ರಂದು ಆಯೋಜಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಕಾರ್ಯಕ್ರಮದಲ್ಲಿ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನೇತ್ರಾವತಿಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡುವಂತೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಕರೆ ನೀಡಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಮನವಿ ಮಾಡಿದ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ವರ್ಷಗಳ ಕಾಲ ಅಭಿವೃದ್ಧಿಪರ ಆಡಳಿತದ ಮೂಲಕ ಹಲವಾರು ಭಾಗ್ಯಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಆದರೆ ಕರಾವಳಿ ಜನತೆಗೆ ಮಾತ್ರ ನೀರಿನ ಖೋತಾ ಭಾಗ್ಯ ನೀಡಿರುವುದು ಬೇಸರದ ಸಂಗತಿ ಎಂದರು.

ಮೇ 16ರಂದು ಅಪರಾಹ್ನ 3 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭೊಗಳ್ಳಲಿದೆ ಎಂದು ವಿವರಿಸಿದ ಶೆಟ್ಟಿ, ಎತ್ತಿನಹೊಳೆ ಯೋಜನೆಯಿಂದಾಗುವ ಬಾಧಕಗಳ ಬಗ್ಗೆ ಮುಖ್ಯಮಂತ್ರಿಯ ಮನವೊಲಿಸಿ ಯೋಜನೆಯನ್ನು ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಶಾಸಕರಾದ ಜೆ.ಆರ್.ಲೋಬೊ, ವಸಂತ ಬಂಗೇರ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಮೊದಲಾದವರು ನೇತ್ರಾವತಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಸಹಕಾರ ನೀಡಿದ್ದರೂ ರಾಜ್ಯ ಸರಕಾರಕ್ಕೆ ನಮ್ಮ ಒತ್ತಡ ಸಾಕಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಗರದ ನೀರಿನ ಸಮಸ್ಯೆಗೂ ಎತ್ತಿನಹೊಳೆ ಯೋಜನೆಗೂ ಸಂಬಂಧವೇ ಇಲ್ಲ ಎಂಬ ಉತ್ತರ ನೀಡಿದ್ದಾರೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಉಸ್ತುವಾರಿ ಸಚಿವರು ಎತ್ತಿನಹೊಳೆ ವಿಚಾರದಲ್ಲಿ ಮಾತ್ರ ಯಾಕೆ ಸ್ಪಂದಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದವರು ಬೇಸರಿಸಿದರು.

ನಗರದ ಜನತೆ ಉಸಿರಾಡಬೇಕಾದರೆ ನೇತ್ರಾವತಿ ಜೀವಂತವಾಗಿರಬೇಕು. ಇದಕ್ಕಾಗಿ ನಗರದ ಜನತೆ ಬೀದಿಗಿಳಿದು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಮಂಗಳೂರಿನಲ್ಲಿ ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಮಿತಿಯ ಮಾರ್ಗದರ್ಶಕ ಮಂಡಳಿಯ ಹರಿಕೃಷ್ಣ ಬಂಟ್ವಾಳ್ ಎಚ್ಚರಿಸಿದರು.

ತಜ್ಞರ ಸಮಿತಿಗೆ ವಿರೋಧ ವಿಧಾನ ಪರಿಷತ್ ಐವನ್ ಡಿಸೋಜರವರು ತಜ್ಞರಾದ ದಯಾನಾಥ್ ಕೋಟ್ಯಾನ್, ಪ್ರೊ. ವಿವೇಕ ರೈ, ಪ್ರೊ.ಮಧ್ಯಸ್ಥರನ್ನು ಒಳಗೊಂಡ ಸಮಿತಿಯ ಮೂಲಕ ಜಿಲ್ಲೆಯಲ್ಲಿ ನೀರಿನ ಅಭಾವ ಆಗದ ರೀತಿಯಲ್ಲಿ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬಹುದು ಎಂಬ ಬಗ್ಗೆ ಕಾರ್ಯಾಗಾರ ನಡೆಸಿ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ. ಆದರೆ ಈ ಸಮಿತಿಯನ್ನು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವಿರೋಧಿಸುತ್ತದೆ ಎಂದು ಮಾರ್ಗದರ್ಶಕ ಮಂಡಳಿಯ ಎಂ.ಜಿ. ಹೆಗಡೆ ಹೇಳಿದರು. ನೇತ್ರಾವತಿ ನದಿಯ ವಿಷಯ ಇಲ್ಲದೆ ಸಲ್ಲಿಸಲಾಗುವ ವರದಿಗೆ ಯಾವುದೇ ಅರ್ಥ ಇಲ್ಲವಾದ್ದರಿದ ತಜ್ಞರು ಕೂಡಾ ಕಾರ್ಯಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂಬುದಾಗಿ ಸಮಿತಿ ವಿನಮ್ರವಾಗಿ ವಿನಂತಿಸುತ್ತದೆ ಎಂದು ಅವರು ಹೇಳಿದರು.

ಸರಕಾರ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಮಾತುಕತೆಗೆ ಮುಂದಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಮಿತಿಯ ಸಂಚಾಲಕ ಸತ್ಯಜಿತ್ ಸುರತ್ಕಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ, ಸಂಚಾಲಕರಾದ ಪುರುಷೋತ್ತಮ ಚಿತ್ರಾಪುರ, ದಿನಕರ ಶೆಟ್ಟಿ, ಹನೀಫ್ ಕೊಣಾಜೆ, ಪ್ರಶಾಂತ್, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News