ಪುತ್ತೂರು: ಗಾಳಿ ಮಳೆಗೆ ಮೆಸ್ಕಾಂಗೆ 14 ಲಕ್ಷ ರೂ. ನಷ್ಟ

Update: 2016-05-13 11:10 GMT

ಪುತ್ತೂರು, ಮೇ 13: ಪುತ್ತೂರು, ಸುಳ್ಯ, ಕಡಬದಲ್ಲಿ ಗಾಳಿ ಸಹಿತ ಸುರಿದ ಮಳೆಗೆ ಪುತ್ತೂರು ಮೆಸ್ಕಾಂ ವಿಭಾಗಕ್ಕೆ ಸುಮಾರು 14 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಪುತ್ತೂರು ವಿಭಾಗ ಕಾರ್ಯಪಾಲಕ ಇಂಜಿನಿಯರ್ ನಾರಾಯಣ ಪೂಜಾರಿ ತಿಳಿಸಿದ್ದಾರೆ.

ಪುತ್ತೂರು ಉಪವಿಭಾಗದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದರೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿಲ್ಲ. ಸುಳ್ಯ ಉಪ ವಿಭಾಗದಲ್ಲಿ ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ 60 ಕಂಬಗಳು ಉರುಳಿ ಬಿದ್ದಿವೆ. ಕಡಬ ಉಪ ವಿಭಾಗದಲ್ಲಿ ಕಡಬ ಸುಬ್ರಹ್ಮಣ್ಯ ನಡುವಣ 60 ಕಂಬಗಳು ಉರುಳಿ ಬಿದ್ದಿವೆ. ಒಂದು ವಿದ್ಯುತ್ ಕಂಬ ಮುರಿದರೆ ಅದರ ಮರು ಸ್ಥಾಪನೆಗೆ ಕಾಮಗಾರಿ ಮತ್ತು ಸಾಗಾಟ ವೆಚ್ಚ ಸೇರಿ ಗುತ್ತಿಗೆದಾರರಿಗೆ 12 ಸಾವಿರ ರೂ. ಪಾವತಿಸಬೇಕು. ಪುತ್ತೂರು ಮೆಸ್ಕಾಂ ವಿಭಾಗದಿಂದ 120 ಕಂಬಗಳ ಮರು ಸ್ಥಾಪನೆಗೆ 14 ಲಕ್ಷ ರೂ. ವೆಚ್ಚ ಮಾಡಲಾಗುವುದು. ಮುಂಗಾರು ಪೂರ್ವ ಮಳೆಗೆ ಪ್ರತಿ ವರ್ಷ ಇದೇ ರೀತಿ ಅನಾಹುತ ಸಂಭವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪುತ್ತೂರು 110 ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹಾದು ಹೋಗುವ ಪುತ್ತೂರು ಮತ್ತು ಸುಳ್ಯ ತಾಲೂಕುಗಳ 11 ಕೆ.ವಿ. ಸಾಮರ್ಥ್ಯದ 19 ಫೀಡಗಳಲ್ಲೂ ಮೇ 11ರಂದು ರಾತ್ರಿ ತಾಂತ್ರಿಕ ತೊಂದರೆ ಉಂಟಾಗಿತ್ತು. ಪರಿಹಾರ ಕಾಮಗಾರಿಗಳನ್ನು ನಡೆಸಿ ಮೇ 12ರ ಮಧ್ಯಾಹ್ನದ ವೇಳೆಗೆ ಎಲ್ಲಾ ವಿದ್ಯುತ್ ಫೀಡಗಳಲ್ಲೂ ವಿದ್ಯುತ್ ಮರು ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೇ 12ಕ್ಕೆ 18 ಕಂಬಗಳು ಮುರಿದಿವೆ

ಮೇ 12ಕ್ಕೆ ಸಂಜೆ ಸುರಿದ ಗಾಳಿ ಮಳೆಗೆ ಮೆಸ್ಕಾಂ ಪುತ್ತೂರು ವಿಭಾಗಕ್ಕೆ ಸಂಬಂಧಿಸಿ ಮೊಟೆತ್ತಡ್ಕ ಎನ್.ಆರ್.ಸಿ.ಸಿ, ಬನ್ನೂರು ಅಲ್ಪುಂಡ, ಸವಣೂರು ಸೇರಿದಂತೆ ಹಲವಾರು ಕಡೆಗಳಲ್ಲಿ ಸುಮಾರು 18 ಕಂಬಗಳು ಧರೆಗುರುಳಿವೆ. ಅವುಗಳಲ್ಲಿ ಹೆಚ್ಚಿನವು ಮುರಿದಿವೆ ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಹಿತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News