ಉಪ್ಪಿನಂಗಡಿ: ಚರಂಡಿಯಲ್ಲಿ ಹರಿದು ಪೋಲಾಗುತ್ತಿದೆ ಕುಡಿಯುವ ನೀರು

Update: 2016-05-13 11:31 GMT

ಉಪ್ಪಿನಂಗಡಿ, ಮೇ 13: ಚರಂಡಿ ಕಾಮಗಾರಿಯ ಮೂಲಕ ಅನಗತ್ಯ ನೀರು ಪೋಲು ಮಾಡಲು ಉಪ್ಪಿನಂಗಡಿ ಪಂಚಾಯತ್ ಆಡಳಿತ ಮುಂದಾಗಿದ್ದು, ಜನರಿಗೆ ಪೂರೈಕೆಯಾಗಬೇಕಾದ ಶುದ್ಧ ಕುಡಿಯುವ ನೀರು ಚರಂಡಿಯಲ್ಲಿ ಹರಿದರೂ ಪಂಚಾಯತ್ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.

ಉಪ್ಪಿನಂಗಡಿ ಪೇಟೆಯಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಉಪ್ಪಿನಂಗಡಿ ಪಂಚಾಯತ್ ಮುಂದಾಗಿದ್ದು, ಕೆಲವು ಅಂಗಡಿಗಳವರು ಅತಿಕ್ರಮಿಸಿಕೊಂಡಿದ್ದ ಚರಂಡಿ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದು, ಇಲ್ಲಿನ ಬ್ಯಾಂಕ್ ರಸ್ತೆಯಲ್ಲಿ ಇದೀಗ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಚರಂಡಿ ನಿರ್ಮಾಣ ಕಾಮಗಾರಿ ಸಂದರ್ ಕುಡಿಯುವ ನೀರು ಸರಬರಾಜಿನ ಹಲವು ಪೈಪ್‌ಲೈನ್‌ಗಳು ಒಡೆದು ಹೋಗಿದೆ. ಇದರಿಂದಾಗಿ ಈ ನೀರು ಅನಗತ್ಯವಾಗಿ ಪೋಲಾಗುತ್ತಿದೆ. ನಾಲ್ಕೈದು ಕಡೆ ಇದೇ ರೀತಿ ನೀರು ಪೋಲಾಗುತ್ತಿದ್ದು, ಗುರುವಾರದಿಂದಲೇ ಚರಂಡಿಯಲ್ಲಿ ಹರಿಯತೊಡಗಿದೆ. ಆದ್ದರಿಂದ ಹಲವರಿಗೆ ನಿನ್ನೆಯಿಂದ ನೀರಿಲ್ಲದ ಪರಿಸ್ಥಿತಿ ಬಂದೊದಗಿದೆ.

ಅನಗತ್ಯ ನೀರು ಪೋಲು ಮಾಡದಂತೆ, ನೀರನ್ನು ಮಿತವಾಗಿ ಬಳಸುವಂತೆ ಬುದ್ಧಿ ಮಾತು ಹೇಳುವ ಪಂಚಾಯತ್ ಮಾತ್ರ ಪೇಟೆಯಲ್ಲಿ ಅನಗತ್ಯವಾಗಿ ನೀರು ಈ ರೀತಿ ಪೋಲಾಗಿ ಚರಂಡಿಯಲ್ಲಿ ಹರಿದರೂ ತಲೆಕೆಡಿಸಿಕೊಂಡಂತಿಲ್ಲ. ಉಪ್ಪಿನಂಗಡಿಯಲ್ಲಿ ಈ ಬಾರಿ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಆದರೂ, ಇಲ್ಲಿ ಅನಗತ್ಯ ನೀರು ಪೋಲಾಗುತ್ತಿರುವುದನ್ನು ಹಲವರು ಪಂಚಾಯತ್ ಗಮನಕ್ಕೆ ತಂದರೂ, ಶುಕ್ರವಾರದವರೆಗೆ ನೀರು ಪೋಲಾಗುವುದನ್ನು ತಡೆಗಟ್ಟಲು ಪಂಚಾಯತ್ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಂಚಾಯತ್‌ನ ಅಭಿವೃದ್ಧಿ ಕಾಮಗಾರಿಯಿಂದಾಗಿ ಬಿಎಸ್ಸೆನ್ನೆಲ್ ಗ್ರಾಹಕರೂ ಕೂಡಾ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲಲ್ಲಿ ಬಿಎಸ್ಸೆನ್ನೆಲ್ ಕೇಬಲ್‌ಗಳು ತುಂಡಾಗಿ ಬಿದ್ದಿದ್ದು, ಹಲವು ಕಡೆ ದೂರವಾಣಿ ಸಂಪರ್ಕ, ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಇಲ್ಲಿ ವರ್ತಕರೇ ಅಧಿಕವಿದ್ದು, ದೂರವಾಣಿ ಸಂಪರ್ಕ ಕಡಿತದಿಂದಾಗಿ ಹೆಚ್ಚಿನವರು ತೊಂದರೆಗೆ ಸಿಲುಕುವಂತಾಗಿದೆ.

ಈ ಹಿಂದಿನ ಚರಂಡಿ ಇದ್ದ ಜಾಗದಲ್ಲಿಯೇ ಹೊಸದಾಗಿ ಚರಂಡಿ ನಿರ್ಮಾಣ ಕಾಮಗಾರಿ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಹಿಂದೆ ಇದ್ದ ಮೋರಿ, ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದೆ. ಅದರೆ ಕಾಮಗಾರಿ ನಿರ್ವಹಿಸುವವರು ಅದನ್ನು ರಸ್ತೆ ಬದಿಯೇ ರಾಶಿ ಹಾಕಿದ್ದು, ಆದ್ದರಿಂದ ಅಲ್ಲಲ್ಲಿ ಅಡೆತಡೆವುಂಟಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ, ಸರಾಗ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಕೆಲವು ಅಂಗಡಿಗಳ ಎದುರೇ ಇದನ್ನು ರಾಶಿ ಹಾಕಿರುವುದರಿಂದ ಕೆಲವು ಅಂಗಡಿಗಳಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಅಭಿವೃದ್ಧಿಯ ನೆಪದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯನ್ನು ತಂದೊಡ್ಡಿದ ಪಂಚಾಯತ್‌ನ ಕಾರ್ಯವೈಖರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿವೃದ್ಧಿಗೆ ನಮ್ಮ ಬೆಂಬಲ ಯಾವತ್ತೂ ಇದೆ. ಆದರೆ, ಜನರಿಗೆ ತೊಂದರೆಕೊಟ್ಟು ಅಭಿವೃದ್ಧಿ ಮಾಡುವುದು ಸರಿಯಲ್ಲ. ಕಳೆದ 24 ಗಂಟೆಯಿಂದ ಇಲ್ಲಿ ನೀರು ಪೋಲಾಗುತ್ತಲೇ ಇದೆ. ಈ ಬಗ್ಗೆ ಪಂಚಾಯತ್ ಗಮನಕ್ಕೆ ತಂದರೂ ಅದನ್ನು ಸರಿಪಡಿಸಲು ಪಂಚಾಯತ್ ಮುಂದಾಗಿಲ್ಲ. ಕೆಲವು ಕಡೆ ಅಂಗಡಿಗಳ ಎದುರೇ ಮೋರಿ, ಸಿಮೆಂಟ್ ಕಟ್ಟೆಗಳನ್ನು ತಂದು ರಾಶಿ ಹಾಕಲಾಗಿದೆ. ಮತ್ತೊಂದೆಡೆ ದೂರವಾಣಿ, ಅಂತರ್ಜಾಲ ಸಂಪರ್ಕವೂ ಕಡಿತಗೊಂಡಿದೆ. ಇದರಿಂದ ವರ್ತಕರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ತಕ್ಷಣವೇ ಇನ್ನೊಬ್ಬರಿಗೆ ತೊಂದರೆಯಾಗದಂತೆ ಪೇಟೆಯ ಅಭಿವೃದ್ಧಿಗೆ ಪಂಚಾಯತ್‌ನವರು ಮುಂದಾಗಲಿ.

ಪ್ರಶಾಂತ್ ಡಿಕೋಸ್ಟಾ, ಅಧ್ಯಕ್ಷರು, ವರ್ತಕರ ಸಂಘ ಉಪ್ಪಿನಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News