ಮಾಜಿ ಸಚಿವರಿಂದ ಹಾಸ್ಯಾಸ್ಪದ ಹೇಳಿಕೆ: ಮೊಯ್ದಿನ್ ಬಾವ ಪ್ರತ್ಯಾರೋಪ

Update: 2016-05-13 11:54 GMT

ಮಂಗಳೂರು, ಮೇ 13: ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಮರಳು ಲಾಬಿ ಎಂಬ ಮಾಜಿ ಸಚಿವರ ಹೇಳಿಕೆ ಹಾಸ್ಯಾಸ್ಪದ ಎಂದು ಶಾಸಕ ಮೊಯ್ದಿನ್ ಬಾವ ಪ್ರತ್ಯಾರೋಪಿಸಿದ್ದಾರೆ.

ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಂಬೆ ಅಣೆಕಟ್ಟಿನಲ್ಲಿ ಫೆಬ್ರವರಿ ತಿಂಗಳಲ್ಲಿ ಗೇಟು ಅಳವಡಿಸಿರುವುದರಿಂದ ನೀರಿಗೆ ತೊಂದರೆಯಾಗಿದೆ ಎಂಬುದಾಗಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಮಾತು ಎಂದರು.

ಪ್ರತಿ ವರ್ಷವೂ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿಯೇ ತುಂಬೆ ಅಣೆಕಟ್ಟಿನ ಕಿಂಡಿಗಳಿಗೆ ಗೇಟ್ ಅಳವಡಿಸಲಾಗುತ್ತದೆ. ಈ ಬಾರಿಯೂ ಡಿಸೆಂಬರ್ 26ರಂದು ಗೇಟ್ ಅಳವಡಿಸಲಾಗಿತ್ತು. ಈ ಬಗ್ಗೆ ದಾಖಲೆಯೂ ಇದೆ. ಹಾಗಿದ್ದರೂ ಸಚಿವರು ಹೇಳಿರುವಂತೆ ಫೆಬ್ರವರಿಯಲ್ಲಿ ಗೇಟ್ ಅಳವಡಿಸಲಾಗಿದೆ ಎಂಬುದು ಸುಳ್ಳು ಎಂದರು.

ಜಿಲ್ಲೆಯಲ್ಲಿ ಪ್ರತಿ ವರ್ಷ ಜನವರಿಯಿಂದ ಮೇ ಆರಂಭದ ಅವಧಿವರೆಗೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗುತ್ತದೆ. ಆದರೆ ಈ ಬಾರಿ ಗುರುವಾರದವರೆಗೆ ಆಗಿರುವ ಮಳೆಯ ಪ್ರಮಾಣ 13 ಮಿ.ಮೀ. ಮಾತ್ರ. ಆದರೆ ಸಚಿವರು ಮಾತ್ರ ಗೊಂದಲದ ಹೇಳಿಕೆ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ತಾನು ಸಚಿವನಾಗಿದ್ದಾಗ ಲಕ್ಯಾ ಡ್ಯಾಂನಿಂದ ನೀರು ತರಲು ಯೋಜನೆ ರೂಪಿಸಿದ್ದರೂ ಪ್ರಸಕ್ತ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ಅದನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನಿಂದ ತೊಡಕಿದ್ದರೂ ಅಧಿಕಾರಿಗಳು, ಕೆಐಒಸಿಎಲ್ ಅಧ್ಯಕ್ಷರ ಸಭೆ ನಡೆಸಿ ಅದನ್ನು ನಿವಾರಿಸಲಾಗಿತ್ತು ಎಂಬ ಬಾಲಿಶ ಹೇಳಿಕೆಯನ್ನು ಸಚಿವ ಪಾಲೆಮಾರ್ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿರುವ ಸಮಸ್ಯೆಯನ್ನು ಸಚಿವರು ಮಾತುಕತೆಯ ಮೂಲಕ ಬಗೆಹರಿಸಿ ಇತ್ಯರ್ಥಪಡಿಸಿದ್ದರೆ ಒಂದು ಹನಿ ನೀರನ್ನು ಇವರ ಅವಧಿಯಲ್ಲಿ ಯಾಕೆ ಬಿಡಲಾಗಿಲ್ಲ ಎಂದು ಸವಾಲೆಸೆದ ಮೊಯ್ದಿನ್ ಬಾವಾ, ಕುಡಿಯುವ ನೀರಿನ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸಿದ್ದರಿಂದ ಲಕ್ಯಾ ಡ್ಯಾಂನಿಂದ 2 ಎಂಜಿಡಿ ನೀರನ್ನು ತಾತ್ಕಾಲಿಕವಾಗಿ ಪೂರೈಸಲು ಸಾಧ್ಯವಾಗಿದೆ ಎಂದರು.

ತುಂಬೆಯ ನೂತನ ಅಣೆಕಟ್ಟು ಪಾಲೆಮಾರ್ ಸರಕಾರವಿದ್ದಾಗಲೇ ಆರಂಭಗೊಂಡಿದ್ದರೂ ಹಣ ನೀಡದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಸುಮಾರು 75 ಕೋಟಿ ರೂ. ವೆಚ್ಚದ ಯೋಜನೆಗೆ ಹಣ ಒದಗಿಸಿ ಮುಕ್ತಾಯ ಹಂತದಲ್ಲಿದೆ ಎಂದು ಅವರು ಹೇಳಿದರು.

ಮೇಯರ್ ಹರಿನಾಥ್ ಮಾತನಾಡಿ, ಮಾಜಿ ಮೇಯರ್ ಶಂಕರ್ ಭಟ್‌ರವರು ತಮ್ಮ ಒಂದು ವರ್ಷದ ಅವಧಿಯಲ್ಲಿ ಯಾವುದೆ ಅಕ್ರಮ ಪೈಪ್‌ಲೈನ್‌ಗಳನ್ನು ತೆರವುಗೊಳಿಸಿಲ್ಲ. ಬದಲಾಗಿ ಇದೀಗ ತುಂಬೆಯಿಂದ ನೀರು ಪೂರೈಕೆಯಾಗುತ್ತಿರುವ ಪಂಚಾಯ್‌ಗಳಿಗೆ ಹೊಸ ಪೈಪ್‌ಲೈನ್ ಅಳವಡಿಸಿ ನೀರು ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಅಲ್ಲದೆ, ತುಂಬೆ ಡ್ಯಾಂನಲ್ಲಿ ನಿನ್ನೆ ಸಂಜೆಯ ವೇಳೆಗೆ 3.9 ಅಡಿಗೆ ಇಳಿದಿದ್ದ ನೀರಿನ ಮಟ್ಟ ಇಂದು 4.5 ಅಡಿಗಳಿಗೆ ಏರಿಕೆಯಾಗಿದೆ ಎಂದು ಮೇಯರ್ ಹರಿನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News