ಬಂಟ್ವಾಳ: ಮೊದಲ ಮಳೆಯ ಆವಾಂತರ; ಮನೆ, ವಿದ್ಯುತ್ ಕಂಬಗಳಿಗೆ ಹಾನಿ

Update: 2016-05-13 12:33 GMT

ಬಂಟ್ವಾಳ, ಮೇ 13: ಗುರುವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಸಿಡಿಲು, ಬಿರುಗಾಳಿಗೆ ಬಂಟ್ವಾಳ ತಾಲೂಕಿನಾದ್ಯಂತ ವಾಸದ ಮನೆ, ದೇವಸ್ಥಾನ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಚರಂಡಿ ಅವ್ಯವಸ್ಥೆಯಿಂದ ಬಿ.ಸಿ.ರೋಡ್ ಸರ್ವಿಸ್ ರಸ್ತೆಯಲ್ಲಿರುವ ಕೆಲವು ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ತಾಲೂಕಿನ ತೆಂಕ ಕಜೆಕಾರು ಕರ್ಲ ಕ್ವಾರ್ಟರ್ಸ್‌ ಅಮ್ಮು ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಅವರ ಪುತ್ರ ಚೇತನ್‌ಗೆ ಆಘಾತವಾಗಿದ್ದು ಪ್ರಜ್ಞಾಹೀನರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಅಮ್ಮುರವರ ಮನೆಗೂ ಹಾನಿಯಾಗಿದೆ. 

ಕರ್ಲ ಶ್ರೀ ಕೃಷ್ಣ ದೇವಸ್ಥಾನಕ್ಕೆ ಸಿಡಿಲು ಬಡಿದು ವಿದ್ಯುತ್ ಮೀಟರ್ ಸುಟ್ಟು ಹೋಗಿದೆ. ಬಡಗ ಕಜೆಕಾರು ಗ್ರಾಪಂ ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಬರಮೇಲು ಪುತ್ತುಮೋನು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ಹಂಚಿನ ಛಾವಣಿಗೆ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕಾವಳಮೂಡೂರು ಗ್ರಾಮದ ಕೊಂಚಾಡಿ ದರ್ಖಾಸು ಮನೆ ಸಂಜೀವ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕದ ಪರಿಕರಗಳು ಸುಟ್ಟು ಹೋಗಿವೆ. ಮನೆಯ ಗೋಡೆಗೆ ಹಾನಿಯಾಗಿದೆ.

ಮೂಡುಪಡುಕೋಡಿ ಗ್ರಾಮದ ಚಂದ್ರಶೇಖರ ಗೌಡ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಉಂಟಾಗಿದೆ. ಅವರ ಪತ್ನಿ ಸಿಡಿಲಿನ ಆಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿರುವ ಯಕ್ಷಗಾನದ ಹಿಮ್ಮೇಳ ಚೆಂಡೆವಾದಕ ವೆಂಕಟೇಶ್ ಶೆಟ್ಟಿ ಮೂರ್ಜೆ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.

ಬೋಳಂಗಡಿ ಚೆನ್ನಯ್ಯ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು, 25 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ನೇರಳಕಟ್ಟೆಯಲ್ಲಿ ಮರವೊಂದು ಬಿದ್ದ ಪರಿಣಾಮ ಟ್ರಾನ್ಸ್‌ಫಾರ್ಮರ್ ಧರಾಶಾಹಿಯಾಗಿದ್ದು, ಮೂರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮೆಸ್ಕಾಂ ಇಲಾಖೆಯಿಂದ ಮರ ತೆರವು ಹಾಗೂ ಟ್ರಾನ್ಸ್‌ಫಾರ್ಮರ್ ಬದಲಿ ಕಾರ್ಯಾಚರಣೆ ಶುಕ್ರವಾರ ಅಪರಾಹ್ನದವರೆಗೂ ನಡೆದಿದೆ.

ಬಂಟ್ವಾಳ ಉಪವಿಭಾಗದ ಪಚ್ಚಿನಡ್ಕದಲ್ಲಿ 2 ಕಂಬಗಳಿಗೆ ಹಾನಿಯಾಗಿದ್ದರೆ, ಕಲಾಯಿ, ಪೊಳಲಿ, ಮುಡಿಪು, ಪಜೀರು, ಬಂಟ್ವಾಳದಲ್ಲಿ ತಲಾ ಒಂದೊಂದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ವಿಟ್ಲ ಉಪವಿಭಾಗದ ಮಾಣಿ, ನೇರಳಕಟ್ಟೆ, ಉಕ್ಕುಡ, ಕಲ್ಲಡ್ಕ ಮೊದಲಾದೆಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರ, ಮರದ ಗೆಲ್ಲು ಬಿದ್ದ ಪರಿಣಾಮ ಹಾಗೂ ಸಿಡಿಲಿನ ತೀವ್ರತೆಗೆ ತಾಲೂಕಿನ ವಿವಿಧೆಡೆಗಳಲ್ಲಿ ತಡರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಮೆಸ್ಕಾಂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.

ನಿನ್ನೆ ರಾತ್ರಿ ಮಾಯವಾದ ವಿದ್ಯುತ್ ನಗರ ಪ್ರದೇಶದಲ್ಲಿ ಬೆಳಗ್ಗೆಯೇ ಪ್ರತ್ಯಕ್ಷವಾದರೆ, ಗ್ರಾಮಾಂತರ ಪ್ರದೇಶದಲ್ಲಿ ಇಂದು ಸಂಜೆಯ ವೇಳೆಗೆ ದುರಸ್ತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News