ಭಕ್ತಿ ಚಳವಳಿಯ ಉಗಮ ದಕ್ಷಿಣಭಾರತ: ಪ್ರೊ. ನಾಗಭೂಷಣ ಸ್ವಾಮಿ

Update: 2016-05-13 16:50 GMT

ಕೊಣಾಜೆ, ಮೇ 13: ಭಕ್ತಿ ಚಳುವಳಿಯು ಉಗಮಗೊಂಡದ್ದು ದಕ್ಷಿಣಭಾರತದಲ್ಲಿ. ಎಲ್ಲಾ ವಿದ್ವಾಂಸರುಗಳು ಭಕ್ತಿ ಸಾಹಿತ್ಯದ ಹುಟ್ಟು 15-16ನೆ ಶತಮಾನ ಎಂದು ಗುರುತಿಸಿ, ವೀರಾಬಾಯಿ, ಸಂತ ತುಕಾರಾಮ, ಸೂರದಾಸ ಮುಂತಾದರವರ ಹೆಸರುಗಳುನ್ನು ಹೇಳುತ್ತಾರೆ. ಆದರೆ ಭಕ್ತಿ ಅನ್ನುವುದು 15-16ನೆ ಶತಮಾನದ್ದು ಹೌದಾ? ಎಂದು ಹುಡುಕುತ್ತಾ ಹೊರಟಾಗ ಒಂದು ವಾದ ಹುಟ್ಟಿಕೊಳ್ಳುತ್ತದೆ. ಉತ್ತರಭಾರತವೇ ಇಡೀ ಭಾರತದ ಚರಿತ್ರೆ ಹಾಗೂ ಸಂಸ್ಕೃತವೇ ಎಲ್ಲಾ ಜ್ಞಾನದ ಮೂಲ ಎಂಬೆರಡು ಪೂರ್ವ ಗ್ರಹಿಕೆಗಳನ್ನು ತಪ್ಪುಎಂದು ಬದಿಗಿಟ್ಟು ನೋಡಿದರೆ ಭಕ್ತಿಯ ಉಗಮ 5ನೆ ಶತಮಾನದಲ್ಲೇ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲ ತಮಿಳು ಭಾಷೆಯಲ್ಲಿ ಆಗಿರುವುದು ಕಂಡುಬರುತ್ತದೆ ಎಂದು ಬೆಂಗಳೂರಿನ ಸಂಸ್ಕೃತಿ ಚಿಂತಕ ಪ್ರೊ.ಒ.ಎಲ್. ನಾಗಭೂಷಣ ಸ್ವಾಮಿ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರವು ಮಂಗಳಗಂಗೋತ್ರಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕ ಸ್ಮತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಕ್ತಿ ಸಾಹಿತ್ಯ -ಚಾರಿತ್ರಿಕ ಆಯಾಮ ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.

ಸುಮಾರು 5ನೆ ಶತಮಾನದಿಂದ 16ನೆ ಶತಮಾನದವರೆಗೆ ಅಂದರೆ 1,100 ವರ್ಷಗಳ ಕಾಲ ಬೆಳೆದು ಬಂದ ಭಕ್ತಿ ಸಾಹಿತ್ಯವನ್ನು ನೋಡಿದರೆ ಅಪಾರವಾದ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಅವೆಲ್ಲವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಕ್ಕೆ ಸಾಧ್ಯವಿಲ್ಲ. ಭಕ್ತಿಯನ್ನು ಒಂದು ಮನೋಧರ್ಮ, ಭಾವ, ಧರ್ಮದ ದಾರಿ ಮತ್ತು ಒಂದು ಚಳುವಳಿ ಎಂಬ ಅರ್ಥದಲ್ಲಿ ನೋಡುತ್ತೇವೆ. ಭಕ್ತಿ ಎಂಬುದು ಒಂದು ಲೋಕದೃಷ್ಟಿ ಕೂಡ ಹೌದು. ಇದು ನಮಗೆ ಭಗವದ್ಗೀತೆ, ಭಾಗವತ ಪುರಾಣದಲ್ಲಿ ಸಿಗುವುದಕ್ಕಿಂತಲೂ ಹೆಚ್ಚಾಗಿ ಸ್ಥಳೀಯ ಭಾಷೆಯಲ್ಲಿ ಸಿಗುತ್ತವೆ. ಆಳ್ವಾರರು ಶಿವನ ಕುರಿತ ಸ್ತೋತ್ರಗಳನ್ನು ತಮಿಳಿನಲ್ಲಿ ಬರೆಯುತ್ತಾರೆ. ದೇವರನ್ನು ತಿಳಿದುಕೊಳ್ಳಲು ನಾವು ಬೇರೆ ಭಾಷೆಯನ್ನು ಕಲಿಯಬೇಕಾಗಿಲ್ಲ ನಾವಾಡುವ ಭಾಷೆಯಲ್ಲಿ ದೇವರು ಸಿಗಬೇಕು ಎನ್ನುವ ಮನೋಧರ್ಮ ಮೊದಲು ವ್ಯಕ್ತವಾದದ್ದು ನಮ್ಮ ದಕ್ಷಿಣ ಭಾರತದಲ್ಲಿ ಎಂದು ಹೇಳಿದರು.

ಭಕ್ತಿ ಚಳುವಳಿಯಲ್ಲಿ ಮೊಟ್ಟಮೊದಲ ಬಾರಿಗೆ ಭಕ್ತ ಕವಿಗಳು ನಾನು ಎಂದು ಸಂಬೋಧಿಸಿ ತನ್ನ ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆಯನ್ನು ನೀಡಲು ಆರಂಭಿಸಿದರು. ಈ ಭಕ್ತ ಕವಿಗಳು ತಮ್ಮ ದೇವರನ್ನು ತಮ್ಮ ಸ್ವಂತದ ದೇವರು ಎಂದು ತಿಳಿದುಕೊಂಡಿದ್ದರು. ಹಾಗೆಯೇ ಭಕ್ತಿಕಾವ್ಯದಲ್ಲಿ ಮೊಟ್ಟಮೊದಲಿಗೆ ಹೆಣ್ಣು ಮಾತನಾಡುತ್ತಾಳೆ. ತಮಿಳಿನಲ್ಲಿ ಕರಿಕಾಳಮ್ಮ, ಕನ್ನಡಕ್ಕೆ ಬಂದಾಗ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಕಂಡುಬರುತ್ತಾರೆ. ಇದು ಭಕ್ತಿ ಚಳುವಳಿಯ ಪ್ರಮುಖ ಲಕ್ಷಣವಾಗಿದೆ. ಕನಕದಾಸರು ಅತ್ಯಂತ ಆಧುನಿಕ ಮನಸ್ಸಿನ ಪ್ರತೀಕವಾಗಿ ಕಂಡುಬರುತ್ತಾರೆ. ಬಹುಶಃ ತಮ್ಮ ಜೀವಿತಾವಧಿಯಲ್ಲಿ ಬಹಳ ನೋವು ತಿಂದು ಎಲ್ಲೂ ಸಮಾಧಾನ ಕಾಣದೆ ಸಮಾಧಾನವನ್ನು ಅರಸಿಕೊಂಡು ದೇಶವೆಲ್ಲ ಸುತ್ತಾಡಿದ ವ್ಯಕ್ತಿಯಾಗಿ ಕಾಣುತ್ತಾರೆ. ನಾವು ಏಕಾಂಗಿತನ, ತನಗೆ ಯಾರು ಇಲ್ಲ ಎನ್ನುವ ಅನಾಥ ಭಾವನೆ, ಮನಸ್ಸಿನ ತಲ್ಲಣ ಇವುಗಳನ್ನು ಆಧುನಿಕತೆಯ ಲಕ್ಷಣ ಎಂದುಕೊಳ್ಳುವುದಾದರೆ ಅವೆಲ್ಲವೂ ಕನಕದಾಸರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನಕ ಕೀರ್ತನ ಹಾಗೂ ಕನಕ ಗಂಗೋತ್ರಿ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತಲಾ 3,000ದಂತೆ ನಗದು ಪುರಸ್ಕಾರ, ಕನಕ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿ ಅವರಿಂದ ಕೀರ್ತನ ಪ್ರಸ್ತುತಿಯನ್ನು ನಡೆಸಲಾಯಿತು.

ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಟಿ.ಡಿ. ಕೆಂಪರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ಬಿ. ಶಿವರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕನಕದಾಸ ಸಂಶೋಧನ ಕೇಂದ್ರದ ಸಂಶೋಧನ ಸಹಾಯಕ ನಿತಿನ್ ಪಿ.ಎಸ್. ನಿರೂಪಿಸಿದರು. ವಸಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News