ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಪಿಂಚಣಿ ಯೋಜನೆಯ ಪ್ರಮಾಣಪತ್ರ ವಿತರಣೆ

Update: 2016-05-14 09:22 GMT

ಮಂಗಳೂರು, ಮೇ 14: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಯೋಜನೆಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಚಾಲನೆ ನೀಡಿದರು.

60 ವರ್ಷದ ಮಹಿಳಾ ಫಲಾನುಭವಿ ಮತ್ತು 60 ವರ್ಷಗಳ ಪುರುಷ ಫಲಾನುಭವಿಗೆ ಮಾಹೆಯಾನ 1,000 ರೂ. ಪಿಂಚಣಿ ದೊರೆಯುವ ಪ್ರಸ್ತುತ ಯೋಜನೆಯ 11 ಮಂದಿ ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು, ದ.ಕ. ಜಿಲ್ಲೆಯಲ್ಲಿ ಕಾರ್ಮಿಕ ಫಲಾನುಭವಿಗಳ ಸಂಖ್ಯೆ ಅಧಿಕ ಇದ್ದರೂ ಕೇವಲ 11 ಮಂದಿಗೆ ಪಿಂಚಣಿ ಯೋಜನೆಯ ಪ್ರಮಾಣ ಪತ್ರ ವಿತರಣೆಯಾಗಿದೆ. ಕಾರ್ಮಿಕರಿಗಾಗಿ ಸರಕಾರದಿಂದ ವಿವಿಧ ಸೌಲಭ್ಯಗಳಿದ್ದರೂ ಮಾಹಿತಿ ಕೊರತೆಯಿಂದಾಗಿ ಇಂತಹ ಸೌಲಭ್ಯಗಳು ದುಡಿಯುವ ವರ್ಗಕ್ಕೆ ತಲುಪುತ್ತಿಲ್ಲ ಎಂದರು.

ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ಅವರು ಕಟ್ಟಡ ಕಾರ್ಮಿಕರು ಫಲಾನುಭವಿಗಳೆಂದು ನೋಂದಾವಣೆಯಾದ ತಕ್ಷಣ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಧನ, ಶಾಶ್ವತ ಅಂಗವಿಕಲರಾದರೆ 2 ಲಕ್ಷ ರೂ. ಪರಿಹಾರ (ಶೇಖಡನಾವಾರು) ಹಾಗೂ ಕಾರ್ಮಿಕರು ಸರಕಾರಿ ಅಥವಾ ಸರಕಾರದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ ಗರಿಷ್ಠ 6,000 ರೂ. ವರೆಗೆ ಧನಸಹಾಯ ನೀಡಲಾಗುವುದು. ಅಲ್ಲದೆ, ಕಾರ್ಮಿಕರ ಹೃದ್ರೋಗ ಜೋಡಣೆ, ಕಿಡ್ನಿ ಜೋಡಣೆ, ಕ್ಯಾನ್ಸರ್ ಚಿಕಿತ್ಸೆ, ಕಣ್ಣಿನ ಅಪರೇಷನ್, ಪಾರ್ಶ್ವವಾಯು ಚಿಕಿತ್ಸೆ, ಮೂಳೆ ಅಪರೇಷನ್, ಗರ್ಭಕೋಶದ ಅಪರೇಷನ್, ಅಸ್ತಮಾ ಚಿಕಿತ್ಸೆ, ಗರ್ಭಪಾತದ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಚಿಕಿತ್ಸೆ, ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವುದು, ಮೆದುಳಿನ ರಕ್ತಸ್ರಾವ, ಅಲ್ಸರ್ ಚಿಕಿತ್ಸೆಗಳಿಗಾಗಿ 2 ಲಕ್ಷ ರೂ. ವರೆಗೆ ಧನ ಸಹಾಯ ನೀಡಲಾಗುವುದು. ಕುಷ್ಠರೋಗ, ಕ್ಯಾನ್ಸರ್, ಪಾರ್ಶ್ವವಾಯು, ಕ್ಷಯರೋಗ ಕಾಯಿಲೆಗಳಿಂದ ಶಾಶ್ವತ ಅಂಗವಿಕಲತೆಗಾಗಿ ಮಾಹೆಯಾನ 500 ರೂ. ಅಂಗವಿಕಲತೆ ಪಿಂಚಣಿ, ಮೃತ ಕಾರ್ಮಿಕರಿಗೆ ಅಂತ್ಯಕ್ರಿಯೆಗಾಗಿ 4,000 ರೂ. ಹಾಗೂ ಅನುಗ್ರಹರಾಶಿ 50 ಸಾವಿರ ಸೇರಿ ಒಟ್ಟು 54,000 ರೂ. ಧನಸಹಾಯ ಒದಗಿಸಲಾಗುವುದು ಎಂದವರು ತಿಳಿಸಿದರು. ಅಲ್ಲದೆ, ಸದಸ್ಯರ ಒಂದು ವರ್ಷ ಸದಸ್ಯತ್ವ ಪೂರ್ಣಗೊಂಡ ಬಳಿಕ ಮಹಿಳಾ ಕಾರ್ಮಿಕರಿಗೆ ಎರಡು ಸಲದ ಹೆರಿಗೆಗಾಗಿ ತಲಾ 15,000 ರೂ. ಸೌಲಭ್ಯ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5ರಿಂದ 7ನೆ ತರಗತಿವರೆಗಿನವರಿಗೆ 3,000, 8ರಿಂದ 9ನೆ ತರಗತಿಗೆ 4,000 ರೂ., 10ನೆ ತರಗತಿ, ಡಿಪ್ಲೊಮಾಗೆ 6,000, ಪ್ರಥಮ ಪಿಯುಸಿಗೆ 5,000, ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕೆ 8,000, ಪ್ರಥಮ, ದ್ವಿತೀಯ, ತೃತೀಯ ಪದವಿ, ಐಟಿಐ ಶಿಕ್ಷಣಕ್ಕಾಗಿ 5,000, ಪ್ರಥಮ, ದ್ವಿತೀಯ ಸ್ನಾತಕೋತ್ತರ ಪದವಿ, ಪಿಎಚ್‌ಡಿ ವ್ಯಾಸಂಗಕ್ಕೆ 20,000 ರೂ., ಕಾರ್ಮಿಕರ ಅಥವಾ ಅವರ ಅವಲಂಬಿತರ ಇಬ್ಬರು ಮಕ್ಕಳ ಮದುವೆಗೆ ತಲಾ 50 ಸಾವಿರ ರೂ. ಧನಸಹಾಯ ಹಾಗೂ ಕಾರ್ಮಿಕರಿಗೆ ಮನೆ ಕಟ್ಟಲು ಅಥವಾ ಖರೀದಿಸಲು 2 ಲಕ್ಷ ರೂ. ಸಾಲ ಸೌಲಭ್ಯವಿದ್ದು, ಇದರಲ್ಲಿ 50 ಸಾವಿರ ರೂ. ಸಬ್ಸಿಡಿಯಾದರೆ ಉಳಿದ 1.5ಲಕ್ಷ ರೂ. ಮೇಲೆ ಶೇ. 5 ಬಡ್ಡಿ ದರ ವಿಧಿಸುವ ಸಾಲ ಸೌಲಭ್ಯಗಳು ದೊರೆಯಲಿದೆ ಎಂದು ಡಿ.ಜಿ.ನಾಗೇಶ್ ಮಾಹಿತಿ ನೀಡಿದರು.

ನೋಂದಾಯಿತರಲ್ಲದ ಕಟ್ಟಡ ಕಾರ್ಮಿಕರಿಗೂ ಸೌಲಭ್ಯಗಳಿದ್ದು, ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ ಅಪಘಾತದಿಂದ ಮೃತರಾದರೆ ಅವರ ಕುಟುಂಬಕ್ಕೆ 50 ಸಾವಿರ ರೂ., ಅಪಘಾತದಿಂದ ಗಂಭೀರ ಗಾಯಗೊಂಡ ನೋಂದಾಯಿತರಲ್ಲದ ಕಾರ್ಮಿಕರಿಗೆ 10 ಸಾವಿರ ರೂ.ದಿಂದ 20 ಸಾವಿರ ರೂ.ವರೆಗೆ ಎಕ್ಸ್‌ಗ್ರೇಷಿಯಾ ಪರಿಹಾರ ಧನ ವಿತರಿಸಲಾಗುವುದು ಎಂದು ಅವರು ತಿಳಿಸಿದರು.ಜಿಲ್ಲೆಯ ಕಾರ್ಮಿಕರಿಗೆ ಮಂಜೂರಾಗಿರುವ ಸೌಲಭ್ಯಗಳು. ರಾಜ್ಯದಲ್ಲಿ ನೋಂದಣೆಯಾಗಿರುವ 10,15,000 ಕಟ್ಟಡ ಕಾರ್ಮಿಕರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 43,308 ಮಂದಿ ಒಳಗೊಂಡಿದ್ದಾರೆ. ರಾಜ್ಯದಲ್ಲಿ 82,475 ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳಡಿಯಲ್ಲಿ ಒಟ್ಟು 68,36,57,608 ರೂ. ಹಣ ಮಂಜೂರು ಮಾಡಲಾಗಿದೆ ಎಂದರು.

ದ.ಕ. ಜಿಲ್ಲೆಯ 43,308 ನೋಂದಾಯಿತ ಕಾರ್ಮಿಕರಲ್ಲಿ ಶೈಕ್ಷಣಿಕ ಧನಸಹಾಯವಾಗಿ 5,390 ಫಲಾನುಭವಿಗಳಿಗೆ 2,43,75,582 ರೂ., ಒಳ ರೋಗಿ ವೈದ್ಯಕೀಯಕ್ಕೆ 4 ಮಂದಿ ಫಲಾನುಭವಿಗಳಿಗೆ 1,900 ರೂ., ಪ್ರಮುಖ ವೈದ್ಯಕೀಯ ಧನಸಹಾಯವಾಗಿ 34 ಮಂದಿ ಫಲಾನುಭವಿಗಳಿಗೆ 12,03,403 ರೂ., ಹೆರಿಗೆ ಭತ್ತೆಗಾಗಿ 19 ಮಂದಿ ಫಲಾನುಭವಿಗಳಿಗೆ 2,76,000 ರೂ., ಮದುವೆಗಾಗಿ 724 ಫಲಾನುಭವಿಗಳಿಗೆ 3,59,45,000 ರೂ., ಅಂತ್ಯ ಸಂಸ್ಕಾರ ವೆಚ್ಚ ಮತ್ತು ಅನುಗ್ರಹರಾಶಿ 109 ಫಲಾನುಭವಿಗಳಿಗೆ 57,61,367 ರೂ., ಅಪಘಾತ ಪರಿಹಾರ ಒಬ್ಬರಿಗೆ 1.7 ಲಕ್ಷ ರೂ. ಸಹಿತ ಒಟ್ಟು 6,77,33,252 ರೂ. ಮಂಜೂರು ಮಾಡಲಾಗಿದೆ ಎಂದು ಅವರು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾದ ಮುಹಮ್ಮದ್ ರಫೀಕ್‌ಪ್ರವೀಣ್ ಸಾಲ್ಯಾನ್, ಕ್ರೈಡೈನ ಜೊತೆ ಕಾರ್ಯದರ್ಶಿ ವಿನೋದ್ ಪಿಂಟೋ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿಯವರು ಕಾರ್ಮಿಕರ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು. ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಮಿಕರು ಕೆಲಸ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮರಣ ಹೊಂದಿದರೆ, ಗಾಯಗೊಂಡು ಆಸ್ಪೆತ್ರೆಗೆ ದಾಖಲಾದರೆ ಮತ್ತು ಪ್ರಮುಖ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಅಲ್ಲದೆ, ಕೆಲವು ಪ್ರಕರಣಗಳಲ್ಲಿ ಇನ್ನೂ ಹಣ ಮಂಜೂರಾಗದೆ ಬಾಕಿ ಉಳಿದಿದೆ ಎಂದು ಸಭೆಯಲ್ಲಿದ್ದ ಕೆಲವರು ಕಾರ್ಮಿಕ ಇಲಾಖೆಯ ಬಗ್ಗೆ ದೂರಿಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಕಾರ್ಮಿಕ ಫಲಾನುಭವಿಗಳಿಗೆ ಹಣ ಮಂಜೂರು ಮಾಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ಪ್ರಶ್ನಿಸಿದಾಗ ಪ್ರಕರಣಗಳಿಗೆ ವಿಳಂಬ ಮಾಡದೆ ಒಂದು ತಿಂಗಳೊಳಗೆ ಫಲಾನುಭವಿಗಳಿಗೆ ಹಣವನ್ನು ಮಂಜೂರು ಮಾಡುವುದಾಗಿ ಹೇಳಿದರು. ಅದರಲ್ಲದೆ ಕಾರ್ಮಿಕರ ಸಮಸ್ಯೆಯನ್ನು ಆಲಿಸಲು ತಿಂಗಳ ಮೊದಲ ಮತ್ತು ನಾಲ್ಕನೆ ಗುರುವಾರ ಪ್ರತ್ಯೇಕ ದಿನಗಳನ್ನು ನಿಗದಿಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News